ADVERTISEMENT

ಆರೋಪಿಯನ್ನು 4 ಕಿ.ಮೀ ಬೆನ್ನಟ್ಟಿ ಹಿಡಿದರು !

* ಎಟಿಎಂ ಘಟಕದಲ್ಲಿ ದರೋಡೆಗೆ ಯತ್ನ * ಹುಳಿಮಾವು ಪೊಲೀಸರಿಂದ ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:15 IST
Last Updated 10 ಡಿಸೆಂಬರ್ 2019, 20:15 IST
   

ಬೆಂಗಳೂರು: ಹುಳಿಮಾವು ಠಾಣೆ ವ್ಯಾಪ್ತಿಯ ಎಟಿಎಂ ಘಟಕವೊಂದರಲ್ಲಿ ದರೋಡೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು 4 ಕಿ.ಮೀ.ವರೆಗೆ ಬೆನ್ನಟ್ಟಿ ಹಿಡಿದಿದ್ದಾರೆ.

‘ವೈಶ್ಯ ಬ್ಯಾಂಕ್‌ ಕಾಲೊನಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಒಬ್ಬಾತ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ತಪ್ಪಿಸಿಕೊಂಡಿದ್ದು, ಅವರ ಪತ್ತೆಗೂ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಅದರ ಬಾಗಿಲನ್ನೂ ಮುಚ್ಚಲಾಗಿತ್ತು. ಮಂಗಳವಾರ ನಸುಕಿನಲ್ಲಿ ಘಟಕದ ಬಳಿ ಬಂದಿದ್ದ ಮೂವರು ಆರೋಪಿಗಳು, ಹಾರೆ ಬಳಸಿ ಶೆಟರ್‌ ತೆಗೆದಿದ್ದರು. ಎಟಿಎಂ ಯಂತ್ರವನ್ನೇ ಒಡೆದು ಹಾಕಲು ಪ್ರಯತ್ನಿಸಿದ್ದರು. ಶಬ್ದ ಕೇಳಿ ಅನುಮಾನಗೊಂಡಿದ್ದ ದಾರಿಹೋಕರೊಬ್ಬರು ‘ನಮ್ಮ –100’ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.’

ADVERTISEMENT

‘ಗಸ್ತಿನಲ್ಲಿದ್ದ ಎಎಸ್‌ಐ ಬಿ. ಕಾಂತರಾಜು ಹಾಗೂ ಹೆಡ್‌ ಕಾನ್‌ಸ್ಟೆಬಲ್ ಎಚ್.ಸಿ.ಸಿದ್ದಯ್ಯ ಸ್ಥಳಕ್ಕೆ ತೆರಳಿದ್ದರು. ಹೊಯ್ಸಳ ವಾಹನದ ಸದ್ದು ಕೇಳಿದ್ದ ಆರೋಪಿಗಳು ತಮ್ಮ ಆಟೊದಲ್ಲಿ ಹೊರಟಿದ್ದರು. ಕಾಂತರಾಜು ಹಾಗೂ ಸಿದ್ದಯ್ಯ ಅವರು ಹೊಯ್ಸಳ ವಾಹನದಲ್ಲೇ ಆರೋಪಿಗಳಿದ್ದ ಆಟೊವನ್ನು ಬೆನ್ನಟ್ಟಿದ್ದರು’ ಎಂದು ಹೇಳಿದರು.

‘ಹುಳಿಮಾವು ಗೇಟ್ ಹಾಗೂ ಬನ್ನೇರುಘಟ್ಟ ಬಳಿ ಆಟೊ ಓಡಾಡಿತ್ತು. ದೊಡ್ಡಮ್ಮ ದೇವಸ್ಥಾನದ ಬಳಿಯೇ ಪೊಲೀಸರು ಆಟೊವನ್ನು ತಡೆದರು. ಆಟೊದಿಂದ ಇಳಿದು ಆರೋಪಿಗಳು ಓಡಲಾರಂಭಿಸಿದ್ದರು. ಒಬ್ಬ ಸಿಕ್ಕಿಬಿದ್ದ, ಇನ್ನಿಬ್ಬರು ಪರಾರಿಯಾದರು’ ಎಂದು ಅಧಿಕಾರಿ ತಿಳಿಸಿದರು.

‘ಸುಮಾರು 4 ಕಿ.ಮೀ. ದೂರದವರೆಗೂ ಬೆನ್ನಟ್ಟಿ ಆರೋಪಿಯನ್ನು ಹಿಡಿಯಲಾಗಿದೆ. ಆರೋಪಿಯೊಬ್ಬ ಪೊಲೀಸರ ಮೇಲೆಯೇ ಹಾರೆ ಎಸೆದಿದ್ದ. ಅದೃಷ್ಟವಶಾತ್ ಸಿಬ್ಬಂದಿ ಅದರಿಂದ ತಪ್ಪಿಸಿಕೊಂಡರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.