ADVERTISEMENT

ನಿರ್ಲಕ್ಷ್ಯಕ್ಕೆ ‘ಸೂಚ್ಯಂಕ’ವೇ ಸಾಕ್ಷ್ಯ!

ರ‍್ಯಾಂಕ್ ಪಟ್ಟಿಯಲ್ಲಿ ಕಡೆ ಸಾಲಿನಲ್ಲಿವೆ ‘ಉತ್ತರ’ದ 11 ಜಿಲ್ಲೆಗಳು

ರಾಜೇಶ್ ರೈ ಚಟ್ಲ
Published 12 ಡಿಸೆಂಬರ್ 2018, 16:12 IST
Last Updated 12 ಡಿಸೆಂಬರ್ 2018, 16:12 IST
   

ಬೆಂಗಳೂರು: ರಾಜ್ಯ ಸರ್ಕಾರಗಳಿಂದ ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌– ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ನಿರಂತರ ಕೂಗಿನ ಮಧ್ಯೆ, ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಮತ್ತೊಂದು ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ.

ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಮೊತ್ತ ವ್ಯಯವಾದರೂ ಈ ಭಾಗಗಳು ಅದೆಷ್ಟು ಮುಂದುವರಿದಿವೆ ಎನ್ನುವುದರ ತಳಸ್ಪರ್ಶಿ ಮಾಹಿತಿಯನ್ನು ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ‘ಮಾನವ ಅಭಿವೃದ್ಧಿ ಸೂಚ್ಯಂಕ’ದ (ಎಚ್‌ಡಿಐ) ಕಿರು ಚಿತ್ರಣ ಬೊಟ್ಟು ಮಾಡಿ ತೋರಿಸುತ್ತಿದೆ.

ಪ್ರಾದೇಶಿಕ ಅಸಮತೋಲನ ನಿವಾರಿಸಲು ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ನೀಡಿದ ವರದಿಯ ಶಿಫಾರಸುಗಳೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ‘ವಿಶೇಷ ಅಭಿವೃದ್ಧಿ ಯೋಜನೆ’ ಅಡಿ 2017ರ ಅಕ್ಟೋಬರ್‌ವರೆಗೆ ₹ 18,561.56 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ಅಭಿವೃದ್ಧಿಯಲ್ಲಿ ಅಸಮತೋಲನದ ಅಂತರ ಕಡಿಮೆ ಮಾಡಲು ಸಾಧ್ಯ ಆಗಿಲ್ಲ ಎನ್ನುತ್ತದೆ ಈ ವರದಿ.

ADVERTISEMENT

ಇನ್ನಷ್ಟೇ ಬಿಡುಗಡೆಯಾಗಬೇಕಾದ ಈ ವರದಿಯ ಪ್ರಕಾರ ಮಾನವ ಅಭಿವೃದ್ಧಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ರಾಯಚೂರು ಕಟ್ಟಕಡೆಯ ಸ್ಥಾನದಲ್ಲಿದೆ. ಬಾಗಲಕೋಟೆ, ಬಳ್ಳಾರಿ, ಗದಗ, ವಿಜಯಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳು ಅದಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. ಒಟ್ಟು 30 ಜಿಲ್ಲೆಗಳ ಪೈಕಿ, ಕೊನೆಯಲ್ಲಿರುವ 13 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ – ಕರ್ನಾಟಕ ಭಾಗದ 11 ಜಿಲ್ಲೆಗಳಿವೆ.

ವರದಿಯಲ್ಲಿರುವ ಅಂಕಿಅಂಶಗಳ ಪ್ರಕಾರ ರಾಜ್ಯದ 14 ಜಿಲ್ಲೆಗಳು ಮಾತ್ರ ಅಭಿವೃದ್ಧಿಯಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಈ ಜಿಲ್ಲೆಗಳಲ್ಲಿ ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ ಪೈಕಿ 12 ಇವೆ. ಕಲಬುರ್ಗಿ ವಿಭಾಗದ ಎಲ್ಲ ಆರು ಜಿಲ್ಲೆಗಳಲ್ಲಿ ಯಾವುದೂ ಕೂಡಾ ಆ ಹಂತಕ್ಕೆ ಏರಿಲ್ಲ!

ರಾಜ್ಯದ 176 ತಾಲ್ಲೂಕುಗಳ (ಈ ಸಂಖ್ಯೆ ಈಗ 226) ಪೈಕಿ, ಕಲಬುರ್ಗಿ ವಿಭಾಗದ 29 ಮತ್ತು ಬೆಳಗಾವಿ ವಿಭಾಗದ 43 ಸೇರಿ ಒಟ್ಟು 133 ತಾಲ್ಲೂಕುಗಳ ಸ್ಥಿತಿ ಕೆಳಮಟ್ಟದಲ್ಲಿವೆ. ಅಭಿವೃದ್ಧಿ ಸಾಧಿಸಿದ ತಾಲ್ಲೂಕುಗಳ ಪಟ್ಟಿಯಲ್ಲಿ ಬೆಂಗಳೂರು ವಿಭಾಗದ ನಾಲ್ಕು ಮತ್ತು ಮೈಸೂರು ವಿಭಾಗದಲ್ಲಿ ಒಂದು ತಾಲ್ಲೂಕು ಸ್ಥಾನ ಪಡೆದಿವೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ (2011ರ ಜನಗಣತಿ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆ ಶೇ 24.1ರಷ್ಟು. ಆದರೆ, ಅತ್ಯಂತ ಹಿಂದುಳಿದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಬಳ್ಳಾರಿ, ಕೋಲಾರ, ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯದ ಜನಸಂಖ್ಯೆ ಶೇ 35ಕ್ಕೂ ಹೆಚ್ಚು. ಇದೂ ಈ ಜಿಲ್ಲೆಗಳ ಹಿಂದುಳಿಯುವಿಕೆಗೆ ಕಾರಣ ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ.

*ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವೆಚ್ಚ ಮಾಡುವ ವಲಯವನ್ನು ಗುರುತಿಸುವ ಲೆಕ್ಕಾಚಾರದಲ್ಲಿ ಎಡವುತ್ತಿದ್ದೇವೆ. ಅದೇ ಹಿನ್ನಡೆಗೆ ಕಾರಣವೆನಿಸುತ್ತದೆ

-ಪ್ರೊ. ಆರ್‌.ಎಸ್‌. ದೇಶಪಾಂಡೆ, ಆರ್ಥಿಕ ತಜ್ಞ


ಮುಚ್ಚಿಡಲಾಗಿದೆ ಮೌಲ್ಯಮಾಪನ ವರದಿ

ನಂಜುಂಡಪ್ಪ ಸಮಿತಿ ಗುರುತಿಸಿದ ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ‘ವಿಶೇಷ ಅಭಿವೃದ್ಧಿ ಯೋಜನೆ’ (ಎಸ್‌ಡಿಪಿ) ಅಡಿ 11 ವರ್ಷಗಳ ಅವಧಿಯಲ್ಲಿ ಬಿಡುಗಡೆಯಾದ ₹ 20,454 ಕೋಟಿಯಲ್ಲಿ 18,561.56 ಕೋಟಿ ವೆಚ್ಚವಾಗಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2017ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ವೆಚ್ಚದಿಂದ ಆಗಿರುವ ಅಭಿವೃದ್ಧಿಯ ಮೌಲ್ಯಮಾಪನ ನಡೆಸಿದ್ದು, ಆ ವರದಿಯ ಪ್ರಕಾರ 26 ತಾಲ್ಲೂಕುಗಳು ‘ಅಭಿವೃದ್ಧಿ’ ಹೊಂದಿ ಪಟ್ಟಿಯಿಂದ ಹೊರಬಂದಿವೆ. ಆದರೆ, ‌ಭದ್ರಾವತಿ, ವಿರಾಜಪೇಟೆ, ಮೂಡಿಗೆರೆ, ಸೋಮವಾರಪೇಟೆ, ಹೊಸಪೇಟೆ ಸೇರಿ ಒಟ್ಟು ಎಂಟು ತಾಲ್ಲೂಕುಗಳು ಈ ಅವಧಿಯಲ್ಲಿ ಹೊಸತಾಗಿ ‘ಹಿಂದುಳಿದ’ ಪಟ್ಟಿಗೆ ಸೇರಿವೆ. ಈ ಮೌಲ್ಯಮಾಪನ ವರದಿಯನ್ನೂ ಸರ್ಕಾರ ಬಹಿರಂಗಪಡಿಸಿಲ್ಲ.

ಇಂದಿನಿಂದ ಅಧಿವೇಶನ

ಬೆಂಗಳೂರು: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬೆಳಗಾವಿಯಲ್ಲಿ ಮೊದಲ ಬಾರಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ‘ವೈಫಲ್ಯ’ಗಳನ್ನು ಮುಂದಿಟ್ಟು ಕದನ ನಡೆಸಲು ಬಿಜೆಪಿ ಅಣಿಯಾಗಿದೆ. ಇನ್ನೊಂದೆಡೆ ಅಲ್ಪಾವಧಿಯಲ್ಲಿ ಹಲವು ಜನಪರ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದು ತಮ್ಮ ಹೆಗ್ಗಳಿಕೆ ಎಂದು ಬಿಂಬಿಸಿಕೊಳ್ಳಲು ಸರ್ಕಾರ ತಯಾರಿ ನಡೆಸಿದೆ.

2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಪರಂಪರೆಗೆ ನಾಂದಿ ಹಾಡಿದ್ದರು. 12 ವರ್ಷಗಳ ಬಳಿಕ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನವನ್ನು ನಡೆಸುವ ಅವಕಾಶ ಮತ್ತೆ ಅವರಿಗೆ ಲಭಿಸಿದೆ. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಈಗ ಮಿತ್ರಪಕ್ಷ. ಅಂದು ಮಿತ್ರ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಈಗ ವಿರೋಧ ಪಕ್ಷವಾಗಿದೆ.

ಬದಲಾದ ರಾಜಕೀಯ ಸನ್ನಿವೇಶ, ಸವಾಲುಗಳ ಮಧ್ಯೆ ಇದೇ 10ರಿಂದ 10 ದಿನ ಅಧಿವೇಶನ ನಡೆಯಲಿದೆ.

ಬಿಜೆಪಿ ತಯಾರಿ: ರೈತರ ಸಾಲಮನ್ನಾ ಕೇವಲ ಘೋಷಣೆಯಾಗಿದೆ. ರೈತರ ಮನೆಗೆ ಬ್ಯಾಂಕ್ ನೋಟಿಸ್ ಬರುವುದು ತಪ್ಪಿಲ್ಲ. ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿರುವ ಬಿಜೆಪಿ, ಮೊದಲ ದಿನವೇ ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಪಣ ತೊಟ್ಟಿದೆ.

‘ಸಾಂದರ್ಭಿಕ ಶಿಶು ಎಂದು ಹೇಳಿಕೊಳ್ಳುತ್ತಿರುವ ಕುಮಾರಸ್ವಾಮಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ನೀಡಿದ್ದ ವಾಗ್ದಾನ ಕೇವಲ ಕಾಗದದಲ್ಲೇ ಉಳಿದಿದೆ. ಬ್ಯಾಂಕ್ ನೋಟಿಸ್‌ಗೆ ಹೆದರಿ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ’ ಎಂದು ಟೀಕಿಸಿರುವ ಬಿಜೆಪಿ, ಇದೇ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಮೈತ್ರಿ ಸರ್ಕಾರವನ್ನು ಕಟ್ಟಿ ಹಾಕಲು ಆಲೋಚಿಸಿದೆ.

ಕಬ್ಬು ಬೆಳೆಗಾರರ ಬಾಕಿ ಪಾವತಿ ವಿಷಯವನ್ನೂ ಪ್ರಸ್ತಾಪಿಸಿ, ವಾಕ್ಸಮರಕ್ಕೆ ಬಿಜೆಪಿ ಮುಂದಾಗುವುದೂ ಖಚಿತ.

ಸಾಧನೆಯೇ ಶ್ರೀರಕ್ಷೆ: ಸಾಲಮನ್ನಾ ಆಗಿಲ್ಲ ಎಂಬ ಬಿಜೆಪಿ ಟೀಕೆಯನ್ನು ಎದುರಿಸಲು ಸಜ್ಜಾಗಿರುವ ಕುಮಾರಸ್ವಾಮಿ, ಅಧಿವೇಶನಕ್ಕೆ ಎರಡು ದಿನ ಬಾಕಿ ಇರುವಾಗ ದೊಡ್ಡಬಳ್ಳಾಪುರ ಹಾಗೂ ಸೇಡಂ ತಾಲ್ಲೂಕಿನ ರೈತರಿಗೆ ಋಣಮುಕ್ತ ರೈತ ಪ್ರಮಾಣ ಪತ್ರ ವಿತರಿಸುವ ಮೂಲಕ ಬಿಜೆಪಿ ನಾಯಕರ ಬಾಯಿ ಕಟ್ಟಿಹಾಕುವ ಯತ್ನ ನಡೆಸಿದ್ದಾರೆ.

ಮಹಾಮಳೆಯಿಂದ ಮನೆ, ಜಮೀನು ಕಳೆದುಕೊಂಡು ಸಂತ್ರಸ್ತರಾದ ಕೊಡಗಿನವರಿಗೆ ಮನೆ ಕಟ್ಟಿಕೊಡುವ ಯೋಜನೆ ಹಾಗೂ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರಗಳಿಗೆ ಚಾಲನೆ ನೀಡಿರುವ ಮುಖ್ಯಮಂತ್ರಿ, ಈ ವಿಷಯದಲ್ಲಿ ಬಿಜೆಪಿ ನಾಯಕರು ತಕರಾರು ಎತ್ತದಂತೆ ಜಾಣ ನಡೆ ತೋರಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಿದ್ದ ಹತ್ತಾರು ಯೋಜನೆಗಳ ಅನುಷ್ಠಾನಕ್ಕೆ ಈಗಾಗಲೇ ಆದೇಶ ಹೊರಬಿದ್ದಿದೆ. ಇಸ್ರೇಲ್ ಮಾದರಿ ಕೃಷಿ, ಮೀಟರ್ ಬಡ್ಡಿಕೋರರಿಗೆ ಕಡಿವಾಣ ಹಾಕಲು ‘ಬಡವರ ಬಂಧು’ ಯೋಜನೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಗಳ ಜಾರಿಯಂತಹ ಕಾರ್ಯಕ್ರಮಗಳನ್ನು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಜಾರಿಯಾಗಿರುವುದನ್ನು ಮುಂದಿಟ್ಟು, ವಿರೋಧ ಪಕ್ಷದ ಆಪಾದನೆಯನ್ನು ತಳ್ಳಿಹಾಕುವ ಲೆಕ್ಕಾಚಾರ ಕೂಡ ಮೈತ್ರಿ ಸರ್ಕಾರದ ನಾಯಕರದ್ದಾಗಿದೆ.

ಕೈ ಶಾಸಕರ ಮೌನ: ಅಧಿವೇಶನದ ವೇಳೆ ಸಂಪುಟ ವಿಸ್ತರಣೆಗೆ ಒತ್ತಡ ಹಾಕುವ ಲೆಕ್ಕಾಚಾರ ಕಾಂಗ್ರೆಸ್ ಶಾಸಕರಲ್ಲಿತ್ತು. ಕಲಾಪಕ್ಕೆ ಗೈರಾಗುವ ಆಲೋಚನೆಯೂ ಕೆಲವರಲ್ಲಿತ್ತು. ಇದೇ 22ಕ್ಕೆ ಮುಹೂರ್ತ ನಿಗದಿ ಮಾಡಿರುವುದರಿಂದ ಶಾಸಕರು ಮೌನಕ್ಕೆ ಶರಣಾಗಿದ್ದಾರೆ.

ಐದು ರಾಜ್ಯಗಳ ಫಲಿತಾಂಶದತ್ತ ಕುತೂಹಲ

ಉತ್ತರ ಭಾರತದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಇದೇ 11ರಂದು ಹೊರಬೀಳಲಿದೆ. ಈ ಫಲಿತಾಂಶ ಬಿಜೆಪಿ ಪರ ಬಂದರೆ ಮೈತ್ರಿಸರ್ಕಾರದಲ್ಲಿ ತಲ್ಲಣ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ಈಗಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ ಮೇಲುಗೈ ಸಾಧಿಸಿದರೆ ಮೈತ್ರಿ ಸರ್ಕಾರದ ಹಾದಿ ಸುಗಮವಾಗಲಿದೆ. ಫಲಿತಾಂಶವು ಅಧಿವೇಶನ ಹಾಗೂ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂರೂ ರಾಜಕೀಯ ಪಕ್ಷಗಳ ನಾಯಕರಲ್ಲಿದೆ.

* ಉತ್ತರ–ದಕ್ಷಿಣ ಭೇದವಿಲ್ಲದೇ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮೈತ್ರಿ ಸರ್ಕಾರದ ದಾರಿ ಮತ್ತು ಗುರಿ. ಈ ವಿಷಯ ಮುಂದಿಟ್ಟು ಬಿಜೆಪಿ ರಾಜಕೀಯ ಮಾಡಲು ಮುಂದಾದರೆ ಸದನದಲ್ಲಿ ತಕ್ಕ ಉತ್ತರ ನೀಡಲಿದ್ದೇನೆ
-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.