ಹಾವೇರಿ: ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಅನಂತಕುಮಾರ್ ಹೆಗಡೆ ಅವರನ್ನುದ್ದೇಶಿಸಿ ಹೇಳಿದ್ದಾರೆ.
ಹಾವೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ ಕುಮಾರ್ ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಮನಸ್ಸಿಗೆ ಬಂದಂತಹ ಹೇಳಿಕೆ ನೀಡುತ್ತಿದ್ದಾರೆ. ಅವರು ಸಂಸದರಾಗಿ ಮಾಜಿ ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಕನಿಷ್ಠ ಪಕ್ಷ ಅನಂತಕುಮಾರ್ ಹೆಗಡೆ ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ? ಎಂದು ಕಿಡಿಕಾರಿದರು.
ಅನಂತಕುಮಾರ್ ಹೆಗಡೆಯವರು ಏಕವಚನದಲ್ಲಿ ಮಾತನಾಡಲು ಪ್ರಚೋದಿಸಿದ್ದೇ ಸಿದ್ದರಾಮಯ್ಯ ಅವರು ಎಂದು ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಪ್ರಲ್ಹಾದ ಜೋಶಿ ಅವರು ರಾಜಕೀಯವಾಗಿ ಆರೋಪ ಮಾಡುತ್ತಾನೇ ಇರುತ್ತಾರೆ ಎಂದು ನಿರ್ಲಕ್ಷಿಸಿದರು.
ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡನೆ
ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರುವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ರೈತರರಿಗೆ ಪರಿಹಾರ ನೀಡಿಲ್ಲವೆಂದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ರೈತರಿಗೆ ₹2000 ತಾತ್ಕಾಲಿಕ ಪರಿಹಾರವನ್ನು ನೀಡುತ್ತಿದ್ದು ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ನಂತರ ಪುನಃ ಎನ್.ಡಿ.ಆರ್.ಎಫ್ ನಿಯಮಾವಳಿ ಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.