ADVERTISEMENT

ಭೋವಿ ನಿಗಮದ ಅವ್ಯವಹಾರ:ಆರೋ‍ಪಿ ಒಳಉಡುಪು ತೆಗೆಸಿ ಅವಮಾನ;ಸಿಐಡಿ DYSP ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 19:51 IST
Last Updated 23 ನವೆಂಬರ್ 2024, 19:51 IST
FIR.
FIR.   

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಮಹಿಳೆ ಎಸ್‌.ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬನಶಂಕರಿ ಪೊಲೀಸರು ಚುರುಕುಗೊಳಿಸಿದ್ದಾರೆ.

ಮರಣ ಪತ್ರ ಹಾಗೂ ಜೀವಾ ಸಹೋದರಿ ಎಸ್‌.ಸಂಗೀತಾ ನೀಡಿದ ದೂರು ಆಧರಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಇನ್ನೂ ಬಂಧಿಸಿಲ್ಲ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ವಿವರ: ‘ನವೆಂಬರ್​​ 14ರಿಂದ 23ರ ವರೆಗೆ ವಿಡಿಯೊ ಕಾನ್ಫರೆನ್ಸ್​​​​ ಮೂಲಕ ತನಿಖೆ ನಡೆಸಲು ನ್ಯಾಯಾಲಯದಿಂದ ಸೂಚಿಸಲಾಗಿತ್ತು. ಆದರೆ 14ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಡಿವೈಎಸ್‌ಪಿ ಕನಕಲಕ್ಷ್ಮಿ ನನ್ನ ಅಕ್ಕನಿಗೆ ಸೂಚಿಸಿದ್ದರು. ಅಕ್ಕನೊಂದಿಗೆ ಮತ್ತೊಬ್ಬರು ವಿಚಾರಣೆಗೆ ಹಾಜರಾಗಿದ್ದರು. ಜೀವಾಳ ಒಳ ಉಡುಪುಗಳನ್ನು ತೆಗೆಸಿ, ‘ಸೈನೈಡ್ ತಂದಿದ್ದೀರಾ’ ಎಂದು ಪ್ರಶ್ನಿಸಿ ಮಾನಸಿಕ ಕಿರುಕುಳ ನೀಡಿದ್ದರು. ‘ನೀವೆಲ್ಲಾ ಯಾಕೆ ಬುದುಕಿದ್ದೀರಾ? ನೀನು ಮತ್ತು ನಿನ್ನ ತಂಗಿ ದುಡ್ಡು ಹೇಗೆ ಸಂಪಾದಿಸು
ತ್ತಿದ್ದೀರಾ’ ಎಂದು ಪ್ರಶ್ನಿಸಿದ್ದರು’ ಎಂದು ಜೀವಾ ಬರೆದಿದ್ದ 11 ಪುಟಗಳ ಮರಣ ಪತ್ರದ ಆಧಾರದಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಎಲ್ಲಾ ದಾಖಲಾತಿಗಳನ್ನು ಒದಗಿಸಿ
ದರೂ ₹25 ಲಕ್ಷ ಹಣ ಕೊಡು. ಇಲ್ಲ ವಾದರೆ ನೀವೆಲ್ಲಾ ಯಾಕೆ ಬದುಕಬೇಕು, ಹೋಗಿ ಸಾಯಿರಿ’ ಎಂದು ನಿಂದಿಸಿದ್ದರು. ಅಂಗಡಿ ಪರಿಶೀಲಿಸಿ ಎಲ್ಲರ ಮುಂದೆ ಅವಮಾನ ಮಾಡಿದ್ದರು. ನವೆಂಬರ್ 14 ಮತ್ತು 21ರಂದು ಇಡೀ ದಿನ ವಿಚಾರಣೆ ವೇಳೆ ಮಾನಸಿಕ ಕಿರುಕುಳ ನೀಡಿದ್ದರು. ಅಕ್ಕ ಆತ್ಮಹತ್ಯೆಗೂ ಮುನ್ನ 11 ಪುಟಗಳ ಪತ್ರ ಬರೆದಿದ್ದು, ಅಕ್ಕನ ಸಾವಿಗೆ ಕಾರಣರಾದ ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಜೀವಾ ಅವರು ಪದ್ಮನಾಭನಗರದಲ್ಲಿ ಸಹೋದರಿ ಸಂಗೀತಾ ಜತೆ ವಾಸಿಸು ತ್ತಿದ್ದರು. ಸಂಗೀತಾ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಶುಕ್ರವಾರ ಬೆಳಿಗ್ಗೆ ಜೀವಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಖಾತೆಗೆ ಕೋಟ್ಯಂತರ ರೂಪಾಯಿ ವರ್ಗ

ಪೀಣ್ಯ ಬಳಿ ಮರದ ವಸ್ತು ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದ ಜೀವಾ ಅವರು ಭೋವಿ ಅಭಿವೃದ್ಧಿ ನಿಗಮಕ್ಕೆ ಕೆಲವು ಸಾಮಗ್ರಿಗಳನ್ನು ಸರಬರಾಜು ಮಾಡಿದ್ದರು. ಆದರೆ, ಸಾಮಗ್ರಿ ಖರೀದಿ ಮೊತ್ತಕ್ಕಿಂತ ಹೆಚ್ಚಿನ ಹಣ ಜೀವಾ ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಿತ್ತು.  ಅದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಿಕ್ಕಿದ್ದವು. ಹಾಗಾಗಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದಲ್ಲಿ ಹಲವು ವರ್ಷಗಳಿಂದ ನಡೆದಿದೆ ಎನ್ನಲಾಗಿರುವ ಅವ್ಯಹಾರಗಳ ಕುರಿತು ತನಿಖೆ ನಡೆಸಿರುತ್ತಿರುವ ಸಿಐಡಿ, ₹87 ಕೋಟಿಗೂ ಹೆಚ್ಚು ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿತ್ತು. ನಿಗಮದ ಬ್ಯಾಂಕ್ ಖಾತೆಯಿಂದ ಜೀವಾ ಅವರ ಖಾತೆಗೂ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಹಾಗಾಗಿ ತನಿಖೆ ಮುಂದುವರಿಸಿದ್ದ ಸಿಐಡಿ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.