ಬೆಂಗಳೂರು: ಜಿಲ್ಲೆಗಳ ವಿಭಜನೆ ಮಾಡುವ ಕುರಿತು ಬಳ್ಳಾರಿ, ಬೆಳಗಾವಿ, ತುಮಕೂರು ಜಿಲ್ಲೆಗಳ ಬಳಿಕ ಈಗ ಮೈಸೂರು ಜಿಲ್ಲೆ ವಿಭಜಿಸುವ ವಿಷಯ ಮುನ್ನೆಲೆಗೆಬಂದಿದೆ.
ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಉಪವಿಭಾಗವನ್ನು ಅರಸು ಜಿಲ್ಲೆ ಎಂದು ಘೋಷಿಸುವಂತೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ವಿಶ್ವನಾಥ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮಾಡಿ, ಈ ಕುರಿತು ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲೆ ವಿಭಜಿಸಿಎಚ್.ಡಿ. ಕೋಟೆ, ಪಿರಿಯಾಪಟ್ಟಣ,ಕೆ.ಆರ್.ನಗರ, ಸಾಲಿಗ್ರಾಮ ಮತ್ತು ಸರಗೂರುಗಳನ್ನು ಒಳಗೊಂಡ ಹುಣಸೂರು ಜಿಲ್ಲೆ ಘೋಷಿಸಲು ಅವರು ಒತ್ತಾಯಿಸಿದ್ದಾರೆ.
ಇದು ಹಳೆಯ ಪ್ರಸ್ತಾವ. ಈ ಹಿಂದೆಯೇ ಒಮ್ಮೆ ಬಿಎಸ್‌ವೈ ಬಳಿ ಸಮಾಲೋಚನೆ ನಡೆಸಿದ್ದೆ. ಶೀಘ್ರವೇ ಆರು ತಾಲ್ಲೂಕು ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ನಾಗರಿಕರ ಜತೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಘೋಷಿತ ನೂತನ ತಾಲ್ಲೂಕುಗಳನ್ನು ಸೇರಿಸಿ ಜಿಲ್ಲೆ ರಚನೆ ಮಾಡಲು ಕೋರಲಾಗಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂಬ ವಿಷಯ ಬಂದಾಗ ಪರ ವಿರೋಧ ಚರ್ಚೆಯಾಗಿ, ಪ್ರತಿಭಟನೆಗಳು ನಡೆದವು. ಸಧ್ಯಕ್ಕೆ ಸರ್ಕಾರ ಜಿಲ್ಲೆ ವಿಭಜನೆಯ ಪ್ರಸ್ತಾವನ್ನು ಕೈಬಿಟ್ಟಿತು. ಇದೇ ರೀತಿ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮಧುಗಿರಿ ಜಿಲ್ಲೆ ಘೋಷಣೆಗೂ ಒತ್ತಾಯ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.