ಬೆಂಗಳೂರು: ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್‌ಐಇ) ಕೊಡಗಿನ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ‘ಕ್ಷೇತ್ರ ಜಲವಿಜ್ಞಾನ ಪ್ರಯೋಗ ಶಾಲೆ’ಯನ್ನು ಸ್ಥಾಪಿಸಿದೆ.
ಮುಖ್ಯವಾಗಿ, ಮಳೆಯ ತೀವ್ರತೆ, ಒಳ ಹರಿವು, ಅಂತರ್ಜಲ ಇತ್ಯಾದಿಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ದತ್ತಾಂಶ ಸಿದ್ಧಪಡಿಸುವುದು ಈ ಪ್ರಯೋಗ ಶಾಲೆಯ ಮುಖ್ಯ ಉದ್ದೇಶ. ಜಲ ವಿಜ್ಞಾನದ ಮೂಲಭೂತ ಸಂಶೋಧನೆಯು ಜಲಾನಯನ ಕ್ಚೇತ್ರಗಳಲ್ಲೇ ಅಳವಡಿಸಿಕೊಂಡು ಅಧ್ಯಯನ ನಡೆಸಲು ತಜ್ಞರಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಎನ್‌ಐಇಯಜಲಸಂಪನ್ಮೂಲ ಕೇಂದ್ರದ ಮುಖ್ಯಸ್ಥ ಯದುಪತಿ ಪುಟ್ಟಿ ತಿಳಿಸಿದ್ದಾರೆ.
ವಿಜ್ಞಾನಿಗಳು ಸ್ವತಃ ಜಲಾನಯನ ಪ್ರದೇಶದಲ್ಲಿ ಸೌಲಭ್ಯಗಳನ್ನು ನಿರ್ಮಿಸಿಕೊಂಡು ಅಲೆದಾಡಿ ಕೆಲಸ ಮಾಡುವುದು ಕಷ್ಟ. ಅತಿಯಾದ ಮಳೆ, ಕ್ಲೀಷ್ಟವಾದ ಪ್ರದೇಶ, ಕಾಡು– ಮೇಡುಗಳಿಂದಾಗಿ ಅಧ್ಯಯನ ನಡೆಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಂಪ್ಯೂಟರ್ ಬಳಸಿ ನಡೆಸಬಹುದಾದ ಅಧ್ಯಯನಗಳೇ ಹೆಚ್ಚುತ್ತಿವೆ ಎಂದಿದ್ದಾರೆ.
ಎನ್‌ಐಇಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಇಸ್ರೊ ಮತ್ತು ಕೇಂದ್ರ ಸರ್ಕಾರದ ಭೂವಿಜ್ಞಾನ ಇಲಾಖೆಯ ಅನುದಾನ ಮೂಲಕ ಕಳೆದ ಮೂರು ದಶಕಗಳಿಂದ ಕೊಡಗಿನ ಮತ್ತು ಹಾಸನ ಜಿಲ್ಲೆಯ ತೀವ್ರ ಮಳೆ ಬೀಳುವ ಜಲಾನಯನ ಪ್ರದೇಶಗಳಲ್ಲಿ ಪ್ರಾಯೋಗಿಕ ಇಳಿಮೇಡುಗಳನ್ನು ನಿರ್ಮಿಸಿ ಸಂಶೋಧನೆ ನಡೆಸುತ್ತಾ ಬಂದಿದೆ. ವಿಶ್ವಬ್ಯಾಂಕ್ ನೆರವಿನ ಮೂಲಕ ನದಿ ಹರಿವಿನ ಮಾಪನ ಸ್ಥಳಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಇಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ನಡೆದ ಸಾಕಷ್ಟು ಅಧ್ಯಯನಗಳ ಲೇಖನಗಳು ಅಂತರರಾಷ್ಟ್ರೀಯ ವಿಜ್ಞಾನದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಶ್ಚಿಮ ಘಟ್ಟಗಳ ಮಳೆ ಮತ್ತು ನದಿ ಹರಿವಿನ ಬಗ್ಗೆ ಸಾಕಷ್ಟು ಹೊಸ ವಿಷಯಗಳು ಬೆಳಕಿಗೆ ಬಂದಿವೆ. ಇಲ್ಲಿನ ನದಿ ಹರಿವು ಮೈದಾನ ಪ್ರದೇಶದಲ್ಲಿ ಕಂಡು ಬರುವ ನೆಲದ ಮೇಲಿನ ಹರಿವಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಯದುಪತಿ ಪುಟ್ಟಿ.
ನೆಲದೊಳಗಿನ ನೀರಿನ ಹರಿವು ಆಳವಾದ ಮಣ್ಣಿನ ಪದರದಲ್ಲಿ ಸ್ವಾಭಾವಿಕವಾಗಿ ನಿರ್ಮಿತವಾದ ಕೊಳವೆಗಳಲ್ಲಿ ಆಗುವುದು ಎಂಬುದು ಸಾಬೀತಾಗಿದೆ. ಪಶ್ಚಿಮಘಟ್ಟದಲ್ಲಿ ಗುಪ್ತಗಾಮಿನಿಗಳು ವಾಸ್ತವ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.