ಬೆಂಗಳೂರು: ಗಾಬರಿ ಪಡುವಂತಹದ್ದೇನಿಲ್ಲ ಗಟ್ಟಿಮುಟ್ಟಾಗಿದ್ದೇನೆ...
ಹೀಗೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.
ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ. ಶ್ರೀನಿವಾಸ್ ಪರ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರು, ಹೆಲಿಪ್ಯಾಡ್‌ನಲ್ಲಿ ಇಳಿದು ಕಾರಿಗೆ ಹತ್ತಿದ್ದರು. ಕಾರಿನ ಒಂದು ಬದಿಯಲ್ಲಿ ನಿಂತು ಜನರತ್ತ ಕೈಬೀಸುತ್ತಿದ್ದ ಅವರು ಏಕಾಏಕಿ ಹಿಂದಕ್ಕೆ ಜಾರಿದರು. ತಕ್ಷಣವೇ ಅಂಗರಕ್ಷಕರೊಬ್ಬರು ನೆರವಿಗೆ ಧಾವಿಸಿ, ಒಳಗೆ ಕೂರಿಸಿದರು.
ಈ ಘಟನೆಯ ವಿಡಿಯೊ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ’ ಎಂದು ಹೇಳಿದ್ದಾರೆ.
ಹೊಸಪೇಟೆ (ವಿಜಯನಗರ): ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಸಿಲು ಹೆಚ್ಚಾಗಿರುವುದರಿಂದ ಸ್ವಲ್ಪ ಬಸವಳಿದಿದ್ದರು’ ಎಂದು ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವೃತ್ತಿಯಿಂದ ವೈದ್ಯರಾಗಿರುವ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.
‘ನಾನು ವೈದ್ಯನಾಗಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. ನಿತ್ಯ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ.
ಅವರ ಕೈಗೆ ಸಣ್ಣ ಇನ್‌ಫೆಕ್ಷನ್ ಆಗಿರುವುದು ಬಿಟ್ಟರೆ ಬೇರೇನೂ ಆಗಿಲ್ಲ’ ಎಂದು ಕೂಡ್ಲಿಗಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಕೂಡ್ಲಿಗಿ ಹೆಲಿಪ್ಯಾಡ್‌ನಲ್ಲಿ ಕಾರಿನ ಬಾಗಿಲಲ್ಲಿ ಸಿದ್ದರಾಮಯ್ಯನವರು ಶನಿವಾರ ಕುಸಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.