ಮಂಗಳೂರು: ‘ನಾನು ಯಾವ ರೇಸ್‌ನಲ್ಲೂ ಇಲ್ಲ. ನಾನು ರೇಸ್‌ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆನೂ ಅಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಇಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿದ ಕುರಿತು ಸದ್ಯಕ್ಕೆ ಕಾನೂನು ಹೋರಾಟ ನಡೆಯುತ್ತಿದೆ. ಇದೇ 9ರಂದು ಇದಕ್ಕೆ ಸಂಬಂಧಿಸಿ ವಿಚಾರಣೆ ನಿಗದಿಯಾಗಿದೆ. ಅಂದು ಸಂಪೂರ್ಣ ತೀರ್ಪು ಬರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಅದು ಆದ ಬಳಿಕ ಈ ಬಗ್ಗೆ ಯೋಚನೆ ಮಾಡೋಣ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯೂ ಆಗುತ್ತಿದೆ. ಆ ತೀರ್ಮಾನ ಬರುವವರಗೆ ಹೇಳಿಕೆ ನೀಡುವುದು ತಪ್ಪಾಗುತ್ತದೆ’ ಎಂದರು.
ಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ನಾಯಕರು ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾಯಕರು ಉತ್ತರ ನೀಡುತ್ತಾರೆ. ಅದಕ್ಕೆ ಏನೂ ಮಾಡಲಿಕ್ಕಾಗದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ತೀರ್ಮಾನ ಮಾಡುತ್ತದೆ. ಪಕ್ಷದ 135 ಶಾಸಕರಿದ್ದಾರೆ. ಅವರು ತಮ್ಮ ಅನಿಸಿಕೆ ಹೇಳುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ’ ಎಂದರು. .
ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತ ತನಿಖಾ ವರದಿ ಸಲ್ಲಿಕೆ ಆಗಿರುವ ಕುರಿತು ಪ್ರತಿಕ್ರಿಯಸಿದಿ ಅವರು, ‘ಕೋವಿಡ್ ಸಂದರ್ಭದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿ ಆಗಿದ್ದರು. ಕೋವಿಡ್‌ನಿಂದ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಕೋವಿಡ್ ಲಸಿಕೆ ನೀಡುವುದರಲ್ಲಿ ಏನೆಲ್ಲ ಅವ್ಯವಸ್ಥೆ ಆಗಿದೆ ಎಂಬುದನ್ನು ನೋಡಿದ್ದೇವೆ. ಆ ಸಂದರ್ಭದಲ್ಲಿ ಆರೋಗ್ಯ ಸಚಿವರು ಈಜುಕೊಳದಲ್ಲಿ ಈಜುತ್ತಿದ್ದುದನ್ನೂ ನೋಡಿದ್ದೇವೆ. ಈ ಕುರಿತ ತನಿಖಾ ವರದಿ ಹೊರಗಡೆ ಬರಲಿ. ತಪ್ಪು ಮಾಡಿದ್ದರೆ, ಅದಕ್ಕೆ ಶಿಕ್ಷೆ ಅನುಭವಿಸಲು ಅವರು ಸಿದ್ಧವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.