ಬೆಂಗಳೂರು: ಉಮೇದುವಾರಿಕೆಯನ್ನು ಹಿಂಪಡೆದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಯವರಲ್ಲಿ ಮನವಿ ಮಾಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಇಂದು ವಾಪಸ್ ಪಡೆದಿದ್ದರು. ಈ ನಡುವೆ ಸಿದ್ದರಾಮಯ್ಯ ಅವರ ಹೇಳಿಕೆ ಹಲವು ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ.
ಮಾಧ್ಯಮ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ,‘ದಿಂಗಾಲೇಶ್ವರ ಸ್ವಾಮೀಜಿಯವರು ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಉಮೇದುವಾರಿಕೆಯನ್ನು ಹಿಂಪಡೆದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ಅನ್ನು ಬೆಂಬಲಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ. ಅವರ ಮಠ ಜಾತ್ಯಾತೀತವಾಗಿದೆ, ಅದೇ ಸಿದ್ಧಾಂತದ ನಮಗೆ ಅವರ ಬೆಂಬಲ ಅಗತ್ಯವಿದೆ’ ಎಂದಿದ್ದಾರೆ.
ಚುನಾವಣಾ ಏಜೆಂಟ್ ಸಚಿನ್ ಪಾಟೀಲ ಅವರು ದಿಂಗಾಲೇಶ್ವರ ಸ್ವಾಮೀಜಿ ಅವರ 'ಅಥಾರಿಟಿ ಪತ್ರ' ಸಲ್ಲಿಸಿ ನಾಮಪತ್ರ ಹಿಂಪಡೆದಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿನ್ ಪಾಟೀಲ, 'ಸ್ವಾಮೀಜಿ ಆದೇಶದಂತೆ ಅವರ ಅಥಾರಿಟಿ ಪತ್ರ ಸಲ್ಲಿಸಿ ನಾಮಪತ್ರ ವಾಪಸ್ ಪಡೆಯಲಾಗಿದೆ. ಸ್ವಾಮೀಜಿ ಅವರ ಈ ನಿರ್ಧಾರಕ್ಕೆ ಕಾರಣ ನಮಗೆ ಗೊತ್ತಿಲ್ಲ' ಎಂದು ಹೇಳಿದ್ದರು.
ಧಾರವಾಡ ಕ್ಷೇತ್ರದಿಂದ ವಿನೋದ್ ಅಸೂಟಿ ಅವರಿಗೆ ಕಾಂಗ್ರೆಸ್ ಟಕೆಟ್ ನೀಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಣಕ್ಕಿಳಿದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.