ಬೆಂಗಳೂರು: ಸಿದ್ಧಾರ್ಥ ಅವರು ತಮ್ಮ ಸಂಸ್ಥೆ ‘ಕೆಫೆ ಕಾಫಿ ಡೇ’ಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ರದಲ್ಲಿ ಅವರು, ‘ನಾನು ಉದ್ಯಮಿಯಾಗಿ ಸೋತಿದ್ದೇನೆ. ಸಾಲಗಾರರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಒತ್ತಡದಿಂದಾಗಿ ಕುಗ್ಗಿ ಹೋಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಪತ್ರವನ್ನು ಅವರೇ ಬರೆದಿದ್ದರೇ ಎಂಬುದು ಖಚಿತಪಟ್ಟಿಲ್ಲ.
ಪತ್ರದ ಸಾರಾಂಶ ಹೀಗಿದೆ: ‘37 ವರ್ಷಗಳ ಕಠಿಣ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ನಮ್ಮ ಸಂಸ್ಥೆಯಲ್ಲಿ 30,000 ಉದ್ಯೋಗಗಳನ್ನು ಸೃಷ್ಟಿಮಾಡಿದೆವು. ಇದಲ್ಲದೆ ನಮ್ಮ ತಂತ್ರಜ್ಞಾನ ಸಂಸ್ಥೆಯಲ್ಲೂ 20,000 ಉದ್ಯೋಗಗಳನ್ನು ಸೃಷ್ಟಿಮಾಡಿದ್ದೇವೆ. ಆರಂಭದಿಂದಲೂ ಈ ಸಂಸ್ಥೆಗಳಲ್ಲಿ ನಾನೇ ದೊಡ್ಡ ಪಾಲುದಾರ. ಸಕಲ ಪ್ರಯತ್ನಗಳ ನಂತರವೂ ಇದನ್ನು ಒಂದು ಲಾಭದಾಯಕ ಉದ್ಯಮವಾಗಿ ಕಟ್ಟುವಲ್ಲಿ ನಾನು ವಿಫಲನಾದೆ. ಈಗ ಎಲ್ಲವನ್ನೂ ಬಿಟ್ಟು ಬಿಡುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗಳನ್ನು ಹುಸಿಮಾಡಿದ್ದಕ್ಕಾಗಿ ನಾನು ಎಲ್ಲರ ಕ್ಷಮೆ ಯಾಚಿಸುವೆ.
‘ಸಾಕಷ್ಟು ದೀರ್ಘ ಕಾಲದ ಹೋರಾಟ ನಡೆಸಿದೆ. ಸಂಸ್ಥೆಯ ಪಾಲುದಾರರೊಬ್ಬರು ತಮ್ಮ ಷೇರುಗಳನ್ನು ಮರು ಖರೀದಿ ಮಾಡುವಂತೆ ನನ್ನಮೇಲೆ ವಿಪರೀತ ಒತ್ತಡ ಹೇರಿದ್ದಾರೆ. ಆರು ತಿಂಗಳ ಹಿಂದೆ ನನ್ನ ಸ್ನೇಹಿತರೊಬ್ಬರಿಂದ ದೊಡ್ಡ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಪಡೆದು ಪಾಲುದಾರರ ಹೂಡಿಕೆಯ ಸ್ವಲ್ಪ ಹಣವನ್ನು ಮರಳಿಸಿದ್ದೆ. ಇವರ ಜೊತೆಗೆ ಇತರ ಷೇರುದಾರರು ಸಹ ಹಣ ಮರಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಅದನ್ನು ತಾಳಲಾಗದೆ ಈ ಸ್ಥಿತಿಗೆ ಬಂದಿರುವೆ.
‘ಆದಾಯ ತೆರಿಗೆ ಇಲಾಖೆಯ ಮಾಜಿ ಮಹಾ ನಿರ್ದೇಶಕರು ನನಗೆ ತುಂಬಾ ಕಿರುಕುಳ ನೀಡಿದ್ದಾರೆ. ಆದಾಯ ತೆರಿಗೆಯ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ ನಂತರವೂ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ನಮ್ಮ ಸಂಸ್ಥೆಯ ಷೇರುಗಳನ್ನು ಜಪ್ತಿ ಮಾಡಿ, ‘ಮೈಂಡ್ ಟ್ರೀ’ ಸಂಸ್ಥೆಯ ಮಾರಾಟ ಒಪ್ಪಂದ ಮುಂದುವರಿಸಲಾಗದಂತೆ ಮಾಡಿದರು. ಇದಾದ ನಂತರ ನಮ್ಮ ‘ಕಾಫಿ ಡೇ’ ಷೇರುಗಳ ಮೇಲೂ ಅವರು ನಿಯಂತ್ರಣ ಸಾಧಿಸಿದರು. ಇದರಿಂದ ಸಂಸ್ಥೆಯು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು.
‘ನೀವು ಧೈರ್ಯ ಕಳೆದುಕೊಳ್ಳದೆ, ಸಂಸ್ಥೆಯನ್ನು ಮುನ್ನಡೆಸಲು ಹೊಸ ಆಡಳಿತ ಮಂಡಳಿಗೆ ಸಹಕಾರ ನೀಡಬೇಕು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ಆಗಿರುವ ಎಲ್ಲಾ ತಪ್ಪುಗಳಿಗೆ ಮತ್ತು ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವ್ಯವಹಾರಕ್ಕೆ ನಾನೊಬ್ಬನೇ ಹೊಣೆಗಾರ. ನಮ್ಮ ತಂಡಕ್ಕಾಗಲಿ, ಲೆಕ್ಕ ಪರಿಶೋಧಕರಿಗಾಗಲಿ ಅಥವಾ ಆಡಳಿತ ಮಂಡಳಿಗಾಗಲಿ ಈ ವ್ಯವಹಾರಗಳ ಬಗ್ಗೆ ಮಾಹಿತಿ ಇರಲಿಲ್ಲ. ನನ್ನ ಕುಟುಂಬವೂ ಸೇರಿದಂತೆ ಎಲ್ಲರಿಂದಲೂ ಈ ಮಾಹಿತಿಯನ್ನು ಮುಚ್ಚಿಟ್ಟಿದ್ದ ಕಾರಣಕ್ಕೆ, ಈ ಎಲ್ಲಾ ತಪ್ಪುಗಳಿಗೆ ನನ್ನನ್ನೇ ಹೊಣೆಯಾಗಿಸಬೇಕು.
‘ಯಾರನ್ನೂ ವಂಚಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಉದ್ಯಮಿಯಾಗಿ ನಾನು ಸೋತಿದ್ದೇನೆ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯ. ಎಂದಾದರೂ ಒಂದು ದಿನ ನೀವು ನನ್ನನ್ನು ಅರ್ಥಮಾಡಿಕೊಂಡು ಕ್ಷಮಿಸುವಿರಿ ಎಂದು ಭಾವಿಸಿದ್ದೇನೆ. ನಮ್ಮ ಎಲ್ಲಾ ಸಾಲಗಳನ್ನು ತೀರಿಸಬಹುದಾದಷ್ಟು ಸೊತ್ತು ನಮ್ಮ ಬಳಿ ಇದೆ. ಸಾಲ ಮರುಪಾವತಿಗೆ ಅದನ್ನು ಬಳಸಬಹುದಾಗಿದೆ’ ಎಂದು ಸಿದ್ಧಾರ್ಥ ಪತ್ರದಲ್ಲಿ ಹೇಳಿದ್ದಾರೆ.
‘ಸಹಿ ತಾಳೆಯಾಗುತ್ತಿಲ್ಲ’
ಬೆಂಗಳೂರು: ಸಿದ್ಧಾರ್ಥ ಅವರು ತಮ್ಮ ಸಂಸ್ಥೆಯ ಸಿಬ್ಬಂದಿಯನ್ನುದ್ದೇಶಿಸಿ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಗ್ಗೆ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಇಲಾಖೆಯು, ‘ಆ ಪತ್ರದ ಸತ್ಯಾಸತ್ಯತೆಯ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ ಅವರು ಇಲಾಖೆಗೆ ಸಲ್ಲಿಸಿರುವ ವಾರ್ಷಿಕ ವರದಿಯಲ್ಲಿರುವ ಅವರ ಸಹಿಯು ಉಲ್ಲೇಖಿತ ಪತ್ರದಲ್ಲಿರುವ ಸಹಿಗೆ ತಾಳೆಯಾಗುತ್ತಿಲ್ಲ’ ಎಂದಿದೆ.
ಈ ಬಗ್ಗೆ ಮಂಗಳವಾರ ಪ್ರಕಟಣೆ ನೀಡಿರುವ ಇಲಾಖೆಯು, ಸಿದ್ಧಾರ್ಥ ಅವರ ಸಂಸ್ಥೆಯಲ್ಲಿ ನಡೆದಿರುವ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಮಾತ್ರ ಅವರ ವಿಚಾರಣೆ ನಡೆಸಲಾಗಿದೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.