‘ಲಂಕೇಶ್’ ಎನ್ನುವ ಮಹಾಸಾಗರದೊಳಗೆ ಒಂದಾಗಿಯೂ ತಮ್ಮದೇ ಆದ ಹರಿವು ಉಳಿಸಿಕೊಂಡ ಜೀವನದಿ ಇಂದಿರಾ ಲಂಕೇಶ್. ತಮ್ಮ 78ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆಗೆ ನಡೆಸಿದ ಪುಟ್ಟ ಮಾತುಕತೆ ಇಲ್ಲಿದೆ:
‘ಹುಳಿಮಾವು’ ಎನ್ನುವ ಮಹಾಸಾಗರ ಕಣ್ಮರೆಯಾದಾಗ ಕಾಡಿದ ಖಾಲಿತನ, ಆ ಗಳಿಗೆಯಲ್ಲಿ ಗೆಳತಿಯಾಗಿ ಜೊತೆನಿಂತ ಹಿರಿಮಗಳು, ಅವಳೂ ಗುಂಡೇಟಿಗೆ ಬಲಿಯಾದಾಗ ಶಾಶ್ವತವಾಗಿ ಉಳಿದುಕೊಂಡ ಘೋರದುಃಖ, ಕೊನೆಯದಾಗಿ ಸಂಭ್ರಮಿಸಿದ ಹುಟ್ಟುಹಬ್ಬ, ನೆನಪಿನಲ್ಲಿ ಮಾಸದೇ ಉಳಿದ ‘ಗಂಡ ಕೊಟ್ಟ ಸೀರೆ’... ಹೀಗೇ ನೆನಪಿನ ಬುತ್ತಿಯಿಂದ ನೋವು–ನಲಿವಿನ ಪುಟಗಳನ್ನು ಬಿಚ್ಚಿಟ್ಟ ಇಂದಿರಾ ಲಂಕೇಶ್.
***
* ಕೊರೊನಾ ತಲ್ಲಣದ ನಡುವೆ ಹುಟ್ಟುಹಬ್ಬದ ಸಂಭ್ರಮವನ್ನು ಹೇಗೆ ಆಚರಿಸಿಕೊಂಡಿರಿ? ಎಲ್ಲಿದೆ ಸಂಭ್ರಮ? ಎಲ್ಲಾ ಕಡೆ ಆತಂಕವೇ ತುಂಬಿದೆಯಲ್ಲ...
ಹಂ, ನಾನು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡು ನಾಲ್ಕು ವರ್ಷ ಕಳೆದವೇನೊ. 2017ರ ಜೂನ್ 2ನೇ ತಾರೀಖು. ನಾನು, ಗೌರಿ, ಬೇಬಿ (ಕವಿತಾ), ಇಶಾ ಎಲ್ಲಾ ಸೇರಿ ರೇಸ್‌ಕೋರ್ಸ್ ಬಳಿ ಇರುವ ಹೋಟೆಲ್ ಒಂದರಲ್ಲಿ ಊಟ ಮಾಡಿ, ಓಡಾಡಿ, ಫೋಟೊ ಎಲ್ಲಾ ತೆಗೆಸಿಕೊಂಡಿದ್ವಿ... ಅದಾದ ನಾಲ್ಕು ತಿಂಗಳಲ್ಲಿ ಗೌರಿ ನನ್ನಿಂದ ದೂರವಾದಳು. ಗೌರಿಯ ಜೊತೆಗೇ ನನ್ನ ಖುಷಿಯ ದಿನಗಳೂ ಹೋದವೇನೊ. ಅದೇ ಕೊನೆ ಅನಿಸುತ್ತೆ, ಅದಾದ ಮೇಲೆ ಇದು ನಾಲ್ಕನೇ ಹುಟ್ಟುಹಬ್ಬ. ಮಕ್ಕಳು–ಮೊಮ್ಮಕ್ಕಳು ಖುಷಿಯಿಂದ ಏನೋ ತಯಾರು ಮಾಡುತ್ತಾರೆ. ಏನೋ ಮಾಡುತ್ತಾರೆ, ಪಾಲ್ಗೊಳ್ಳುತ್ತೇನೆ. ಕೇಕ್ ತರಿಸುತ್ತಾರೆ, ಸಂಭ್ರಮ ಪಡುತ್ತಾರೆ. ಇದಿಷ್ಟೇ...
* ಪಿ. ಲಂಕೇಶ್ ಹೋಗಿ ಎರಡು ದಶಕವಾಯ್ತು, ಗೌರಿ ಹತ್ಯೆಯಾಗಿ ನಾಲ್ಕು ವರ್ಷವಾಯ್ತು. ಆದರೂ ಜೀವನವನ್ನು ಸಹ್ಯ ಮಾಡಿಕೊಳ್ಳಬೇಕಲ್ಲ... ಅದಕ್ಕಾಗಿ ಏನೇನು ಮಾಡುತ್ತೀರಿ?
ಈ ನೋವು ಮಾಸುವಂಥದ್ದಲ್ಲ, ಮರೆಯುವಂಥದ್ದೂ ಅಲ್ಲ ನೋಡಿ. ಲಂಕೇಶ್ ಹೋದಾಗ ದುಃಖವಾಯ್ತು. ಆದರೆ ಮುಂದೆ ಇನ್ನೂ ಬದುಕಿದೆ ಎನ್ನುವ ಭರವಸೆ ಇತ್ತು. ಮಕ್ಕಳು ಚಿಕ್ಕವರು, ಅವರನ್ನು ದಡ ಸೇರಿಸಬೇಕೆನ್ನುವ ಛಲ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಲಂಕೇಶ್ ಇನ್ನಿಲ್ಲವಾದಾಗ ಮನೆಯೊಡೆಯನ ಜಾಗ ತುಂಬಲು ಹಿರಿಮಗಳಾಗಿ ಗೌರಿ ಇದ್ದಳು. ಅವಳಿದ್ದಾಳೆ ಎನ್ನುವ ಧೈರ್ಯವೇ ನನ್ನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡಿದ್ದು. ಗೌರಿ ಮಗಳಲ್ಲ, ನನ್ನ ಅಮ್ಮ. ಅವಳು ಹೋದಳು - ಎಲ್ಲವೂ ಮುಗಿಯಿತು. ಮೊಮ್ಮಕ್ಕಳ ಮುಖ ನೋಡಿ ಬದುಕಿದ್ದೀನಿ ಅಷ್ಟೆ.
* ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಮ್ಮನೇ ಕುಳಿತು ಹಿಂದಿನ ಪುಟಗಳನ್ನು ಬಿಚ್ಚಿಕೊಂಡರೆ ಏನನ್ನಿಸುತ್ತದೆ?
ಸುಮ್ಮನೇ ಕುಳಿತಾಗೆಲ್ಲಾ ಗೌರಿ ನೆನಪಾಗ್ತಾಳೆ. ನಮ್ಮೊಂದಿಗೆ ಇರುವವರಿಗಿಂತ, ಇಲ್ಲದವರೇ ಹೆಚ್ಚು ನೆನಪಾಗುವುದು ಅಲ್ಲವೆ? ನನಗೆ ಗೌರಿ ಬಗ್ಗೆ ಬಹಳ ಆತಂಕವಿರುತ್ತಿತ್ತು. ಅವಳು ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಅಪ್ಪನಂತೆ ಸತ್ಯಕ್ಕಾಗಿ ಕೆಲ ಜನರನ್ನು ವಿರೋಧ ಕಟ್ಟಿಕೊಂಡಿದ್ದಳು. ಕೆಲಸ ಮುಗಿಸಿ ಪ್ರತಿದಿನ ರಾತ್ರಿ ತಡವಾಗಿ ಒಬ್ಬಳೇ ಮನೆಗೆ ಬರುತ್ತಿದ್ದಳು. ಅವಳು ಮನೆ ತಲುಪುವವರೆಗೆ ನನಗೆ ಸಮಾಧಾನ ಇರುತ್ತಿರಲಿಲ್ಲ. ಅವಳಿಂದ ಮೆಸೇಜ್ ಬಂದ ಮೇಲಷ್ಟೆ ನನಗೆ ನೆಮ್ಮದಿ. ಅವಳು ಹೋದ ಮೇಲೂ ಎಷ್ಟೊ ದಿನ ಅವಳ ಮೆಸೇಜ್ ನೋಡುತ್ತಿದ್ದೆ. ಈಗ ಆ ಮೊಬೈಲ್ ಕೂಡ ನನ್ನ ಬಳಿ ಇಲ್ಲ, ಕಳೆದು ಹೋಗಿದೆ.
* ಲಂಕೇಶ್ ಅವರು ದೂರವಾಗಿ ಇಪ್ಪತ್ತು ವರ್ಷ ಮುಗಿದವಲ್ಲ, ಅವರನ್ನು ನೆನೆದಾಗ ಮೊದಲು ಮನದಲ್ಲಿ ಮೂಡುವುದು ಅವರ ಪ್ರೀತಿಯೇ, ಅವರ ಮುನಿಸೇ?
ಅವರು ನೋಡಲು ಒರಟು, ಸಿಟ್ಟು ಜಾಸ್ತಿ. ಆದರೆ ಪ್ರೀತಿಯೇ ಹೆಚ್ಚು. ಜಗಳವಾದಾಗೆಲ್ಲಾ ಮರುಕ್ಷಣವೇ ಅದನ್ನು ಮರೆಯುತ್ತಿದ್ದರು. ಹೀಗಾಗಿ ಮನಸ್ಸಿನಲ್ಲಿ ಉಳಿದ ಮುನಿಸುಗಳು ಕಡಿಮೆಯೇ.
* ಉಡುಗೊರೆಯ ವಿಷಯ ಬಂದಾಗ ತಟ್ಟಂಥ ನೆನಪಾಗುವ ಘಟನೆ?
1996–97 ಇರಬೇಕು. ಅವರು ಹೋಗುವುದಕ್ಕಿಂತ 3– 4 ವರ್ಷ ಹಿಂದಿನ ಘಟನೆ. ನಾನಾಗ ಗಾಂಧಿನಗರದಲ್ಲಿ ಸೀರೆ ಅಂಗಡಿ ನಡೆಸುತ್ತಿದ್ದೆ. ನನ್ನ ಮನಸ್ಸಿಗೂ, ಬದುಕಿಗೂ ನೆಮ್ಮದಿ ನೀಡಿದ ಕೆಲಸ ಅದು. ಆಗ ಹುಟ್ಟುಹಬ್ಬ ಅಂತ ಏನೂ ವಿಶೇಷವಿರುತ್ತಿರಲಿಲ್ಲ. ಹಾಗೇ ಎಂದಿನಂತೆ ಮನೆಗೆಲಸ ಎಲ್ಲಾ ಮುಗಿಸಿ ಅಂಗಡಿಗೆ ಓಡಿದ್ದೆ. ಸ್ವಲ್ಪ ಹೊತ್ತಿನ ಮೇಲೆ ಲಂಕೇಶ್ ಅವರ ಮ್ಯಾನೇಜರ್ ಬಂದು ಒಂದೊಳ್ಳೆ ಸೀರೆ ಕೊಡಿ ಅಂತ ಕೇಳಿದ. ಯಾವ ಥರದ್ದು? ಅಂದರೆ ನಿಮ್ಮಿಷ್ಟದ್ದು ಕೊಡಿ ಅಂದ. ಸರಿ, ನನಗೆ ಯಾವ ಡಿಸೈನ್, ಯಾವ ಬಣ್ಣ ಇಷ್ಟವೊ ಅದನ್ನೇ ಆರಿಸಿ ಕೊಟ್ಟೆ. ಸಾಮಾನ್ಯವಾಗಿ ದುಬಾರಿ ಸೀರೆಗಳು, ಬಹಳ ಗ್ರ್ಯಾಂಡ್ ಇರುವಂಥವು ನನ್ನ ಆಯ್ಕೆ ಆಗುತ್ತಿರಲಿಲ್ಲ. ಪ್ರಿಂಟೆಂಡ್ ಸಿಲ್ಕ್, ಕಾಟನ್ ಸಿಲ್ಕ್ ಸೀರೆಗಳೇ ನನಗಿಷ್ಟ. ಅಂಥದ್ದೇ ಒಂದೊಳ್ಳೆ ಸೀರೆ ಆರಿಸಿ ಕೊಟ್ಟೆ. ಸಂಜೆ ಅದೇ ನನಗೆ ಗಿಫ್ಟ್ ಆಗಿ ಬಂದಿದ್ದು. ಇಂಥ ಸಣ್ಣಸಣ್ಣ ಸಂಗತಿಗಳು ಆಗ ಎಷ್ಟು ದೊಡ್ಡದೊಡ್ಡ ಖುಷಿ ಕೊಡುತ್ತಿದ್ವು ಗೊತ್ತಾ? ನೆನಪಾದರೆ ಈಗಲೂ ನಗು ಬರುತ್ತೆ. ಬಹುಶ ಅವರಿಂದ ನನಗೆ ಬಂದ ಕೊನೆಯ ಗಿಫ್ಟ್ ಇದೇ ಇರಬೇಕು. ಅಥವಾ ನೆನಪಿನಲ್ಲಿ ಉಳಿದಿರುವಂಥದ್ದು ಇದೇ ಅಂತ ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.