ADVERTISEMENT

ನಾನು ಯೋಗೇಶ್ವರ್‌ರನ್ನು ಭೇಟಿನೂ ಮಾಡಿಲ್ಲ, ಮಾತನಾಡಿಯೂ ಇಲ್ಲ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 8:27 IST
Last Updated 21 ಅಕ್ಟೋಬರ್ 2024, 8:27 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಾನು ಸಿ.ಪಿ. ಯೋಗೇಶ್ವರ್ ಅವರನ್ನು ಭೇಟಿನೂ ಮಾಡಿಲ್ಲ. ಮಾತನಾಡಿಯೂ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ADVERTISEMENT

ಯೋಗೇಶ್ವರ್ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆಂದು ಎಚ್.​ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಶಿವಕುಮಾರ್, ‘ಕುಮಾರಸ್ವಾಮಿಗೆ ರಾಜಕಾರಣ ಗೊತ್ತು. ಅವರ ವೈಯಕ್ತಿಕ ರಾಜಕಾರಣ ಮತ್ತು ಅವರ ಪಕ್ಷದ ರಾಜಕಾರಣ ಬೇರೆ, ಬೇರೆ. ನನಗೂ ಬೇಕಾದಷ್ಟು ಮಾಹಿತಿ ಇದೆ’ ಎಂದರು.

‘ನಾನು ಎನ್‌ಡಿಎ ವಿಚಾರ, ಯೋಗೇಶ್ವರ್ ವಿಚಾರಕ್ಕೆ ಹೋಗುವುದಿಲ್ಲ. ಕುಮಾರಸ್ವಾಮಿ ಏನು ಮಾತನಾಡುತ್ತಾರೊ ಆ ಮಾತಿಗೆ ಅವರೇ ಬದ್ಧರಾಗುವುದಿಲ್ಲ. ಅವರಿಗೆಲ್ಲ ನಾನು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ಅದು ಅವರ ಕೆಲಸ ಅಥವಾ ಪಕ್ಷದ ತಂತ್ರ ಇರಬಹುದು. ಸಾರ್ವಜನಿಕವಾಗಿ ಒಂದು ಮಾತನಾಡುತ್ತಾರೆ. ಆಂತರಿಕವಾಗಿ ಒಂದು ಮಾತನಾಡುತ್ತಾರೆ’ ಎಂದು ಟೀಕಿಸಿದರು.

‘ಚನ್ನಪಟ್ಟಣದಿಂದ ಕಾಂಗ್ರೆಸ್ ಪಾಳಯದಲ್ಲಿ ನನ್ನದೇ ಮುಖ, ಕ್ಷೇತ್ರದಲ್ಲಿ ಜೆಡಿಎಸ್ ದುರ್ಬಲ ಎಂದು ನಾನು ತಿಳಿದರೆ ನನ್ನಷ್ಟು ಮೂರ್ಖ ಯಾರೂ ಇಲ್ಲ. ಆದರೆ, ಕುಮಾರಸ್ವಾಮಿ ಇಷ್ಟು ದುರ್ಬಲ ಎಂದು ಭಾವಿಸಿರಲಿಲ್ಲ’ ಎಂದು ವ್ಯಂಗ್ಯವಾಡಿದರು.

ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮ: ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು ‘ಬಹುತೇಕ ಅಂತಿಮ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ. ಅವರು ನೋಡಿಕೊಳ್ಳುತ್ತಾರೆ. ನಾವು ವರಿಷ್ಠರಿಗೆ ಶಿಫಾರಸು ಮಾಡುತ್ತೇವೆ. ಅವರು ಅಂತಿಮ ತೀರ್ಮಾನ ಮಾಡುತ್ತಾರೆ’ ಎಂದರು.

ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಿಜ ನಮ್ಮ ಕಾರ್ಯಕರ್ತರು ಸುರೇಶ್‌ ಹೆಸರು ಹೇಳುತ್ತಿದ್ದಾರೆ , ಪಕ್ಷ, ಹೈಕಮಾಂಡ್ ಏನು ಹೇಳುತ್ತದೆಯೊ  ಅದೇ ಅಂತಿಮ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.