ADVERTISEMENT

ವಿಧಾನಸೌಧದಲ್ಲಿ ವಶಪಡಿಸಿಕೊಂಡ ಹಣಕ್ಕೂ ನನಗೂ ಸಂಬಂಧವಿಲ್ಲ: ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 8:09 IST
Last Updated 6 ಜನವರಿ 2023, 8:09 IST
ಸಿ.ಸಿ ಪಾಟೀಲ
ಸಿ.ಸಿ ಪಾಟೀಲ    

ಬೆಂಗಳೂರು: 'ವಿಧಾನಸೌಧದ ಪೂರ್ವ ದ್ವಾರದ ಬಳಿ ಪೊಲೀಸರು ವಶಪಡಿಸಿಕೊಂಡಿರುವ ಹಣಕ್ಕೂ ನನಗೂ ಸಂಬಂಧವಿಲ್ಲ. ವೀರೋಧ ಪಕ್ಷಗಳ ನಾಯಕರು ಚುನಾವಣೆ ಕಾರಣಕ್ಕಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '₹10 ಲಕ್ಷ ನಗದು ತಂದಿದ್ದ ಅಧಿಕಾರಿ ಹುಚ್ಚನಿದ್ದಾನೆ. ಆದರೂ, ಬ್ಯಾಗ್ ನಲ್ಲಿ ನಗದು ಇದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾನೆ. ಹಣ ಯಾರಿಗೆ ಸೇರಿದ್ದು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ತ‌ನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ' ಎಂದರು.

'ಹಣ ತಂದಿದ್ದ ಅಧಿಕಾರಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ವಿಚಾರಣೆ ನಡೆಯುತ್ತಿದೆ. ದುಡ್ಡು ಕೊಡಲು ವಿಧಾನಸೌಧಕ್ಕೆ ಏಕೆ ಬರಬೇಕಿತ್ತು? ಬೇರೆ ಕಡೆಯೂ ಕೊಡಬಹುದಿತ್ತಲ್ಲವೆ' ಎಂದು ಪ್ರಶ್ನಿಸಿದರು.

ADVERTISEMENT

ಚುನನಾವಣೆಯನ್ನು ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಬಳಿಕ ಸೂಕ್ತ ಕ್ರಮ ಆಗಲಿದೆ ಎಂದರು.

ಗಡುವು ನೀಡಲಾಗದು: 'ಪಂಚಮಸಾಲಿ ಲಿಂಗಾಯಯತರು ಮತ್ತು ಅದರ ಎಲ್ಲ ಉಪ ಜಾತಿಗಳಿಗೂ ಪ್ರವರ್ಗ 2-ಡಿ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ಅಂತಿಮ ವರದಿ ಪಡೆದು ಮೀಸಲಾತಿ ಪ್ರಮಾಣ ನಿಗದಿಪಡಿಸಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು 24 ಗಂಟೆಗಳ ಗಡುವುದು ನೀಡಿರುವುದು ಸರಿಯಲ್ಲ. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪಂಚಮಸಾಲಿ ಸಮುದಾಯದ ಎಲ್ಲ ಉಪ‌ ಜಾತಿಗಳಿಗೂ ಮೀಸಲಾತಿ ಒದಗಿಸಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.