ADVERTISEMENT

ಪೆನ್‌ಡ್ರೈವ್‌: ಚಿಲ್ಲರೆ ರಾಜಕಾರಣ ಮಾಡುವುದಿಲ್ಲ– ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 18:47 IST
Last Updated 30 ಏಪ್ರಿಲ್ 2024, 18:47 IST
<div class="paragraphs"><p>ಡಿ.ಕೆ. ಶಿವಕುಮಾರ್‌</p></div>

ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ‘ಹಾಸನದಲ್ಲಿನ ಪೆನ್‌ಡ್ರೈವ್‌ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅಂತಹ ಚಿಲ್ಲರೆ ರಾಜಕೀಯವನ್ನು ನಾನು ಮಾಡುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಪೆನ್‌ ಡ್ರೈವ್‌ ಪ್ರಕರಣದ ಹಿಂದೆ ಒಬ್ಬ ಮಹಾನಾಯಕ ಇದ್ದಾನೆ’ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಪರೋಕ್ಷ ಆರೋಪದ ಕುರಿತು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಪೆನ್‌ಡ್ರೈವ್‌ ಇದೆ ಎಂದು ಹೆದರಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಚುನಾವಣೆಯಲ್ಲಿ ನೇರವಾಗಿ ಎದುರಿಸುತ್ತೇನೆ. ಏನೇ ವಿಷಯವಿದ್ದರೂ ವಿಧಾನಸಭೆಯೊಳಗೆ ಬಂದು ಮಾತನಾಡಿ ಎಂದು ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದೇನೆ. ಅಲ್ಲಿ ಬರಲಿ’ ಎಂದರು.

ADVERTISEMENT

‘ಬಿಜೆಪಿಯವರು ಪೆನ್‌ಡ್ರೈವ್‌ ಬಿಡುಗಡೆ ಮಾಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಹೇಳಿಕೆ ನೀಡಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ವಿಡಿಯೊ ತುಣುಕುಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಹಂಚಿಕೊಂಡಿರಬಹುದು. ಆದರೆ, ಪೆನ್‌ಡ್ರೈವ್‌ ಬಿಡುಗಡೆ ಹಿಂದೆ ನಾವಾಗಲೀ, ನಮ್ಮ ಪಕ್ಷವಾಗಲೀ ಇಲ್ಲ’ ಎಂದು ಹೇಳಿದರು.

ಬಹಿರಂಗಗೊಂಡಿರುವುದು ಹಳೆಯ ವಿಡಿಯೊಗಳು ಎಂದು ಎಚ್‌.ಡಿ. ರೇವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರವನ್ನೂ ಬರೆದಿದ್ದರು. ಪ್ರಜ್ವಲ್‌ಗೆ ಟಿಕೆಟ್‌ ನೀಡದಂತೆ ಅಮಿತ್‌ ಶಾ ಸೂಚಿಸಿದ್ದರು. ಇದನ್ನು ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದರು ಎಂದರು.

‘ಕುಮಾರಸ್ವಾಮಿ ಮತ್ತು ಅವರ ಕುಟುಂಬದವರಿಗೆ ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಸ್ಫೂರ್ತಿ ಬರುವುದಿಲ್ಲ. ಅದಕ್ಕಾಗಿ ನಮ್ಮ ಬಗ್ಗೆ ಏನಾದರೂ ಹೇಳುತ್ತಿರುತ್ತಾರೆ. ಪೆನ್‌ಡ್ರೈವ್‌ ಬಗ್ಗೆ ಹಿಂದೆಯೇ ಗುಸು ಗುಸು ಚರ್ಚೆ ನಡೆಯುತ್ತಿತ್ತು. ನಾನು ಒಂದು ಪಕ್ಷದ ಅಧ್ಯಕ್ಷ. ಹೀಗಾಗಿ ಯಾರಾದರೂ ಮಾಹಿತಿ ನೀಡುತ್ತಿರುತ್ತಾರೆ’ ಎಂದರು.

ಕುಟುಂಬದವರಲ್ಲ ಎಂಬುದು ಸುಳ್ಳು:

‘ಪ್ರಜ್ವಲ್‌ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್‌ ನನ್ನ ಮಗ ಎಂದು ಅವರೇ ಹಿಂದೆ ಹೇಳಿದ್ದರು. ಎಚ್‌.ಡಿ. ರೇವಣ್ಣ, ಎಚ್‌.ಡಿ. ಕುಮಾರಸ್ವಾಮಿ ಎಂಬ ಹೆಸರಿದೆ. ಎಚ್‌.ಡಿ. ಎಂಬುದು ಎಚ್‌.ಡಿ. ದೇವೇಗೌಡರ ಮಕ್ಕಳು ಎಂದಲ್ಲವೆ? ಇನ್ನು ನಮ್ಮ ಕುಟುಂಬದವರಲ್ಲ ಎಂದು ಹೇಳಲು ಹೇಗೆ ಸಾಧ್ಯ’ ಎಂದು ಶಿವಕುಮಾರ್‌ ಪ್ರಶ್ನಿಸಿದರು.

ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ವಜಾಗೊಳಿಸಲಿ ಅಥವಾ ಅಲ್ಲಿಯೇ ಇಟ್ಟುಕೊಳ್ಳಲಿ. ಅದು ಅವರಿಗೆ ಬಿಟ್ಟ ವಿಚಾರ. ಇದೆಲ್ಲವೂ ಕಣ್ಣೊರೆಸುವ ತಂತ್ರ ಎಂಬುದು ಎಲ್ಲರಿಗೂ ಗೊತ್ತು ಎಂದು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Cut-off box - ‘ಬಿಜೆಪಿ ನಾಯಕರ ಮೌನವೇಕೆ?’ ‘ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆ ಕುರಿತು ಅಮಿತ್‌ ಶಾ ಮಾತನಾಡುತ್ತಿರುತ್ತಾರೆ. ಉಡುಪಿ ಶಾಲೆಯಲ್ಲಿ ನಡೆದ ಪ್ರಕರಣದ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗವನ್ನೇ ಕಳಿಸಲಾಗಿತ್ತು. ಆದರೆ ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ಬಿಜೆಪಿಯವರು ಏಕೆ ಮೌನ ವಹಿಸಿದ್ದಾರೆ’ ಎಂದು ಶಿವಕುಮಾರ್ ಪ್ರಶ್ನಿಸಿದರು. ‘ಪ್ರಲ್ಹಾದ ಜೋಶಿ ಆರ್‌ ಅಶೋಕ ವಿ.ಸುನಿಲ್‌ ಕುಮಾರ್‌ ಸಿ.ಟಿ. ರವಿ ಶೋಭಾ ಕರಂದ್ಲಾಜೆ ಅವರೆಲ್ಲರೂ ಏಕೆ ಮಾತನಾಡುತ್ತಿಲ್ಲ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.