ಬೆಂಗಳೂರು: ‘ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ₹90 ಲಕ್ಷ ಕಮಿಷನ್ ನೀಡಿದ್ದೇನೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಆರೋಪಿಸಿದರು.
ಕಮಿಷನ್‌ಗೆ ಸಂಬಂಧಿಸಿದಂತೆ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ತಮ್ಮ ಮಧ್ಯೆ ನಡೆದ ಮಾತುಕತೆಯ ಆಡಿಯೊವೊಂದನ್ನು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅವರು, ‘₹90 ಲಕ್ಷ ಮೊತ್ತವನ್ನು ನಗದು ರೂಪದಲ್ಲಿ ನೀಡಿದ್ದೇನೆ. ಕಮಿಷನ್ ಕೇಳುವುದು ಅತಿರೇಕವಾಗಿದ್ದು, ಕಾಮಗಾರಿ ಕೈಗೊಳ್ಳುವ ಮುನ್ನವೇ ಕೇಳುತ್ತಿದ್ದಾರೆ. ತಿಪ್ಪಾರೆಡ್ಡಿ ನೇರವಾಗಿ ಕಮಿಷನ್ ಕೇಳಿದ್ದಾರೆ’ ಎಂದು ದೂರಿದರು.
‘ನನಗೆ ಕೆಲಸ ಕೊಡಬೇಡಿ ಎಂದು ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಶಾಸಕ ತಿಪ್ಪಾರೆಡ್ಡಿ ಹೇಳಿರುವ ನಿದರ್ಶನಗಳಿವೆ. ಅವರ ಸಂಬಂಧಿಕ ಸುಭಾಷ್ ರೆಡ್ಡಿಗೆ ಮಾತ್ರ ಕೆಲಸ ಕೊಡಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಗುತ್ತಿಗೆದಾರರಿಗೆ ಚಿತ್ರಹಿಂಸೆ ಕೊಡುವುದೇ ಇವರ ಉದ್ದೇಶ’ ಎಂದು ಕಿಡಿಕಾರಿದರು.
‘ಈ ಆರೋಪದಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ. ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ್‌ಗಾದ ರೀತಿ ನನಗೂ ಆಗಬಹುದು ಅಥವಾ ಆಗದಿರಬಹುದು. ಇದರ ಅರಿವು ಇರುವುದರಿಂದಲೇ ಆಡಿಯೊ ಬಿಡುಗಡೆ ಮಾಡಿದ್ದೇನೆ’ ಎಂದರು.
‘ಚಿತ್ರದುರ್ಗದಲ್ಲಿ ಲಂಚದ ವ್ಯವಸ್ಥೆ ಜಾರಿಗೆ ತಂದವರೇ ಶಾಸಕ ತಿಪ್ಪಾರೆಡ್ಡಿ. ₹1 ಕೋಟಿಗೆ 10 ಲಕ್ಷ ಕಮಿಷನ್ ಅನ್ನು ಶಾಸಕರಿಗೆ ನೀಡಿದ್ದೇನೆ. ಸ್ವಲ್ಪ ಮೊತ್ತವನ್ನು ಎಂಜಿನಿಯರ್ ಮೂಲಕವೂ ನೀಡಲಾಗಿದೆ. ಕಳೆದ ಡಿಸೆಂಬರ್ 27ರಂದು ₹ 30 ಲಕ್ಷ ಮುಂಗಡ ಕಮಿಷನ್ ಕೇಳಿದ್ದರು. ನನ್ನ ಈ ಎಲ್ಲ ಆರೋಪಗಳೂ ಧರ್ಮಸ್ಥಳದ ಮಂಜುನಾಥನ ಆಣೆಯಾಗಿಯೂ ಸತ್ಯವಾಗಿದ್ದು, ತಿಪ್ಪಾರೆಡ್ಡಿ ಅವರ ಮಗನೇ ಸಾಕ್ಷಿ’ ಎಂದರು.
ಆಡಿಯೊದಲ್ಲಿರುವುದೇನು?
‘ನನ್ನನ್ನು ಹಿಡಿದು ಕೇಳುವ ಕೆಪಾಸಿಟಿ ನಿಮಗಿದೆ. ಆದರೆ, ಬಿಲ್ ಮಾಡಬೇಡಿ ಎಂದು ಹೇಳಿದರೆ ತಪ್ಪಾಗುತ್ತದೆ. ಕೊಡ್ತಿನಿ ಎಂದು ಹೇಳಿದ್ದೇನೆ. ಅರ್ಥ ಮಾಡಿಕೊಳ್ಳಿ. ₹5ಕೋಟಿ ₹6 ಕೋಟಿ ಪೆಂಡಿಂಗ್ ಇದೆ. ನಾನು ಹೇಗೆ ಜೀವನ ಮಾಡಬೇಕು. ನಾವು ಮರ್ಯಾದೆ ಇಟ್ಟುಕೊಂಡಿರುತ್ತೀವಿ. ನೀವು ಹಾಗೆ ಮಾಡಬಾರದಿತ್ತು. ನೀವು ಅವರ ಹತ್ತಿರ (ಎಂಜಿನಿಯರ್‌ಗಳಿಗೆ) ಹಾಗೆ ಹೇಳಬಾರದಿತ್ತು’ ಎಂದು ಮಂಜುನಾಥ್ ಹೇಳಿದ್ದಾರೆ.
ಇದಕ್ಕೆ ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿದ್ದು, ‘ನಿಮ್ಮಂತಹ ಹಲವರ ಹತ್ತಿರ ಅಡ್ಜಸ್ಟ್ ಮಾಡಿಕೊಂಡಿದ್ದೇನೆ. ನಾನು ಎಂಜಿನಿಯರ್ ಹತ್ತಿರ ಮಾತನಾಡುತ್ತೇನೆ. ಹಳೆಯದ್ದು ನಾನೂ ಮಾತಾಡಲ್ಲ; ನೀನೂ ಮಾತಾಡಬೇಡ. ನಿನಗೆ ಕೆಲಸ ಕೊಡಬೇಡಿ ಅಂತ ಹೇಳಿಲ್ಲ’ ಎಂದು ಹೇಳಿದ್ದಾರೆ.
‘13-14 ಶಾಸಕರು, 4 ಸಚಿವರ ಬಗ್ಗೆ ದಾಖಲೆಗಳಿವೆ’
’ಕಮಿಷನ್ ಕೇಳಿದ ನಾಲ್ವರು ಸಚಿವರ ಮತ್ತು 13–14 ಶಾಸಕರ ಬಗ್ಗೆ ದಾಖಲೆಗಳಿವೆ. ಕಾನೂನು ಸಲಹೆ ಪಡೆದು ಒಂದು ತಿಂಗಳಲ್ಲಿ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಲಾಗುವುದು’ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
‘ಹಲವು ಗುತ್ತಿಗೆದಾರರ ಬಳಿಕ ಆಡಿಯೊ ಮತ್ತು ವಾಟ್ಸ್‌ಆ್ಯಪ್ ದಾಖಲೆಗಳಿವೆ. ಆದರೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಬಳಿಕ ಕೆಲವರು ಭಯಪಡುತ್ತಿದ್ದಾರೆ. ಸಚಿವ ಮುನಿರತ್ನ ಆಸ್ತಿ ವಿವರ ಕೋರಿ ಆರ್‌ಟಿಐ ಅಡಿಯಲ್ಲಿ ಲೋಕಾಯುಕ್ತರಿಂದ ಮಾಹಿತಿ ಕೇಳಿದ್ದೇವೆ’ ಎಂದರು.
ಬಾಕಿ ಮೊತ್ತ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 18ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ನಡೆಯಲಿದೆ. ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳಿಂದ ₹25 ಸಾವಿರ ಕೋಟಿ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಸಂಘವು ಯಾವುದೇ ಒಂದು ಪಕ್ಷ ಅಥವಾ ಸರ್ಕಾರದ ವಿರುದ್ಧ ಆರೋಪಿಸುತ್ತಿಲ್ಲ. ಇಡೀ ವ್ಯವಸ್ಥೆ ಕುರಿತು ಪ್ರಶ್ನಿಸುತ್ತಿದೆ’ ಎಂದರು.
ಕಾನೂನು ಚೌಕಟ್ಟಿನಲ್ಲೇ ಉತ್ತರ: ಸಚಿವ ಎನ್.ಮುನಿರತ್ನ
‘ಲೋಕಾಯುಕ್ತ ಅಥವಾ ನ್ಯಾಯಾಲಯಕ್ಕೆ ತೆರಳಲು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕಾನೂನಿನಲ್ಲಿ ಅವಕಾಶವಿದೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ನಾನು ಕಾನೂನು ಚೌಕಟ್ಟಿನಲ್ಲಿಯೇ ಉತ್ತರಿಸುತ್ತೇನೆ’ ಎಂದು ಸಚಿವ ಎನ್.ಮುನಿರತ್ನ ಹೇಳಿದರು.
‘ಎಲ್ಲರಿಗೂ ಒಂದೇ ಕಾನೂನು. ದಾಖಲೆಗಳನ್ನು ಸಲ್ಲಿಸಿದರೆ ಅವರು ಶಿಕ್ಷೆಯಿಂದ ಪಾರಾಗಲಿದ್ದಾರೆ. ಇಲ್ಲದಿದ್ದರೆ ಶಿಕ್ಷೆ ಅನುಭವಿಸಲು ಅವರು ಸಿದ್ಧರಾಗಲಿ’ ಎಂದು ಮಾಧ್ಯಮಗಳ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದರು.
ಕಾನೂನು ಹೋರಾಟ: ಶಾಸಕ ತಿಪ್ಪಾರೆಡ್ಡಿ
ಚಿತ್ರದುರ್ಗ: ಲಂಚ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ವಿರುದ್ಧ ಎರಡು ದಿನದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರ ಜೊತೆಗೆ ಇಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆಯಡಿ (ಕೆಎಚ್‌ಎಸ್‌ಡಿಪಿ) ಟೆಂಡರ್ ಕೊಡಿಸದೇ ಇರುವುದಕ್ಕೆ ವೈಯಕ್ತಿಕ ದ್ವೇಷದಿಂದ ಈಗ ಕಮಿಷನ್ ಆರೋಪ ಮಾಡಿದ್ದಾನೆ. ಆತನ ಗುಣವೇ ಹೆದರಿಸಿ ಕೆಲಸ ಮಾಡುವುದು‘ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.