ಬೆಳಗಾವಿ: ‘ಮರಳಿ ಬಿಜೆಪಿ ಸೇರುವಂತೆ ನನಗೂ ಸಾಕಷ್ಟು ಒತ್ತಡ ಬಂದಿದೆ. ಆದರೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.
ಜಿಲ್ಲೆಯ ಅಥಣಿಯಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಕಾಂಗ್ರೆಸ್ ಸೇರಿದ ಮೇಲೆ ಯಾವ ಕ್ಷೇತ್ರಗಳಲ್ಲಿ ಏನೆಲ್ಲ ಪರಿಣಾಮ ಆಯಿತು ಎಂಬುದು ಬಿಜೆಪಿಯವರಿಗೆ ಅರಿವಾಗಿದೆ. ಈಗ ನನ್ನನ್ನು ಮರಳಿ ಪಕ್ಷಕ್ಕೆ ಕರೆಯುವುದು ಅವರಿಗೆ ಅಗತ್ಯ ಮತ್ತು ಅನಿವಾರ್ಯ ಎಂಬಂತಾಗಿದೆ. ಬಿಜೆಪಿಯಲ್ಲಿರುವ ಕೆಲವು ಹಳೆಯ ಗೆಳೆಯರು ಪದೇಪದೇ ಒತ್ತಾಯ ಮಾಡುತ್ತಿದ್ದಾರೆ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದರು.
‘ನಾನು ಜಗದೀಶ ಶೆಟ್ಟರ್ ಅವರು ಒಟ್ಟಿಗೇ ಕಾಂಗ್ರೆಸ್ ಸೇರಿಲ್ಲ. ನಾನು ಅವರಿಗಿಂತಲೂ ಮುಂಚೆ ಸೇರಿದ್ದೇನೆ. ಅವರು ಪಕ್ಷ ಬಿಟ್ಟ ಕಾರಣಕ್ಕೆ ನಾನೂ ಬಿಡುತ್ತೇನೆ ಎಂಬುದು ಸುಳ್ಳು. ಅಥಣಿ ಜನ ನನ್ನ ಮೇಲೆ ನಂಬಿಕೆ ಇಟ್ಟು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ವಿಶ್ವಾಸಿಕನಾಗಿ ನಾನು ದುಡಿಯುತ್ತೇನೆ’ ಎಂದರು.
ನೀವು ಬಿಜೆಪಿ ಸೇರುವುದಾಗಿ ಬಸವರಾಜ ಬೊಮ್ಮಾಯಿ ಹಾಗೂ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರವರ ಭಾವನೆಗೆ ಅವರವರ ಭಕುತಿಗೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.