ADVERTISEMENT

ನಾನು ದ್ರಾವಿಡ ಪಂಥಕ್ಕೆ ಸೇರಿದ್ದೇನೆ: ಬೊಮ್ಮಾಯಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:31 IST
Last Updated 29 ಮೇ 2022, 19:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚನ್ನರಾಯಪಟ್ಟಣ (ಹಾಸನ): ‘ದ್ರಾವಿಡರು ಈ ದೇಶದ ಮೂಲ ನಿವಾಸಿಗಳು. ನಾನು ಅದೇ ಪಂಥಕ್ಕೆ ಸೇರಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ದ್ರಾವಿಡರೇ ಅಥವಾ ಆರ್ಯರೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯಪ್ರಾಚ್ಯದಿಂದ ಬಂದಿದ್ದಾರೆ. ಇಲ್ಲೇ ನೆಲೆಸಿರುವುದರಿಂದ ಅವರು ಭಾರತೀಯರಾಗಿದ್ದಾರೆ. ನಾನು ದ್ರಾವಿಡ ಪಂಥಕ್ಕೆ ಸೇರಿದವ ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ವರಿಷ್ಠರ ಮೂಲ ಎಲ್ಲಿಯದು ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ, ‘ಸೋನಿಯಾಗಾಂಧಿ ಇಟಲಿಯವರು. ರಾಜೀವ್‍ಗಾಂಧಿ ಅವರನ್ನು ಮದುವೆಯಾಗಿ ಭಾರತದ ಪೌರತ್ವ ಪಡೆದಿದ್ದಾರೆ. ನಮ್ಮ ದೇಶದವರು ಅಮೆರಿಕದಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿಲ್ಲವೇ?’ ಎಂದು ಹೇಳಿದರು.

ADVERTISEMENT

‘ಘರ್‌ ವಾಪಸಿ’ಗೆ ಸಲಹೆ: ಟ್ವಿಟರ್‌ನಲ್ಲೂ ಚರ್ಚೆ ಮುಂದುವರಿಸಿರುವ ಸಿದ್ದರಾಮಯ್ಯ, ‘ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ. ನೀವು ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ. ಬೇಗ ‘ಘರ್ ವಾಪಸಿ’ ಆಗಿಬಿಡಿ’ ಎಂದು ಹೇಳಿದರು.

‘ನೆಹರೂ ಅವರನ್ನು ನರೇಂದ್ರ ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಹೇಳುತ್ತೇನೆ. ಇಬ್ಬರೂ ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ‘ಟ್ರೋಲ್ ಗ್ಯಾಂಗ್’ ಮೂಲಕ ಉತ್ತರ ಕೊಡಿಸಲು ಹೋಗಬೇಡಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.