ಬೆಂಗಳೂರು: ‘ದೇವರ ಕೆಲಸ ಮಾಡಬೇಕಲ್ಲವೇ, ಹೀಗಾಗಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣಾ ಸಮಿತಿ ಸಲಹೆಗಾರನಾಗಲು ಒಪ್ಪಿಕೊಳ್ಳುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ತಿಳಿಸಿದ್ದಾರೆ.
ಸಲಹೆಗಾರ ಸ್ಥಾನ ಒಪ್ಪಿಕೊಳ್ಳಬೇಕೆಂಬ ಹೈಕೋರ್ಟ್ ಮನವಿಗೆ ಶನಿವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಸದ್ಯ ನಾನು ಸದ್ಯ ಲಂಡನ್‌ನಲ್ಲಿದ್ದೇನೆ. ಇನ್ನೂ ಒಂದೂವರೆ ತಿಂಗಳು ಇಲ್ಲಿಯೇ ಇರುತ್ತೇನೆ. ನಂತರ ಅಮೆರಿಕಕ್ಕೆ ತೆರಳುತ್ತೇನೆ. ಸೆಪ್ಟೆಂಬರ್ ಕೊನೆಯಲ್ಲಿ ಭಾರತಕ್ಕೆ ಮರಳುತ್ತೇನೆ’ ಎಂದು ವಿವರಿಸಿದರು.
ಶ್ರೀಕೃಷ್ಣ ತುಮಕೂರಿನವರು: ಬಿ.ಎನ್.ಶ್ರೀಕೃಷ್ಣ ಅವರು ಅಪ್ಪಟ ಕನ್ನಡಿಗ. 1941ರ ಮೇ 21ರಂದು ಬೆಂಗಳೂರಿನಲ್ಲಿ ಜನಿಸಿದ ಅವರು 1993ರಿಂದ 1998ರ ಅವಧಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಈಗ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. 1992–93ರ ಅವಧಿಯಲ್ಲಿ ಮುಂಬೈನಲ್ಲಿ ನಡೆದ ಗಲಭೆಗಳ ಬಗ್ಗೆ ತನಿಖೆ ನಡೆಸಿದ್ದ ‘ಶ್ರೀಕೃಷ್ಣ ಆಯೋಗ’ದ ಅಧ್ಯಕ್ಷರಾಗಿದ್ದವರು.
ಹತ್ತು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಶ್ರೀಕೃಷ್ಣ ಅಧ್ಯಾತ್ಮದ ಒಲವು ಹೊಂದಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉರ್ದುವಿನಲ್ಲಿ ಡಿಪ್ಲೊಮಾ ಪಡೆದಿದ್ದಾರೆ.
‘2008ರ ಆಗಸ್ಟ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ವಶಕ್ಕೆ ನೀಡಿದ್ದು ಕಾನೂನು ಬಾಹಿರ’ ಎಂದು ಸಾರಿರುವ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ, ‘ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ಸಲಹೆಯೊಂದಿಗೆ ಮುಂದುವರಿಯಿರಿ’ ಎಂದು ಸಮಿತಿ ನೇಮಕಕ್ಕೆ ಆದೇಶಿಸಿದೆ.
ತೀರ್ಪು ದುಃಖಕರ: ‘ಹೈಕೋರ್ಟ್ ತೀರ್ಪು ದುಃಖಕರ’ ಎಂದು ಹೆಸರು ಹೇಳಲು ಇಚ್ಛಿಸದ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಗೋಕರ್ಣ ದೇವಾಲಯದಲ್ಲಿ 2008ಕ್ಕೂ ಮೊದಲು ಪೌರೋಹಿತ್ಯ ಮಾಡುತ್ತಿದ್ದ ಉಪಾಧಿವಂತರು ಭಕ್ತರನ್ನು ಸುಲಿಗೆ ಮಾಡುತ್ತಿದ್ದರು. ಆದರೆ, ಈಗ ಅದು ಮತ್ತೆ ಸರ್ಕಾರದ ವಶಕ್ಕೆ ಪಡೆದಿರುವುದು ಕಳ್ಳರ ಕೈಗೆ ಆಡಳಿತ ಕೊಟ್ಟಂತೆ ಆಗಿದೆ’ ಎಂದು ಅವರು ಹೇಳಿದ್ದಾರೆ.
ಮಠದ ಪರ ವಾದ ಮಂಡಿಸಿರುವ ಹಿರಿಯ ವಕೀಲ ಎ.ಜಿ.ಹೊಳ್ಳ, ‘ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಹೋಗ್ತಾರೆ. ಹಾಗಾಗಿ ನಾನು ಈಗ ಮಾತನಾಡಿ ಪ್ರಯೋಜನವಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.