ADVERTISEMENT

ಶೀಘ್ರದಲ್ಲೇ ದೆಹಲಿಗೆ ಸಿಎಂ: ಸುಂಪುಟ ವಿಸ್ತರಣೆ ಸುಳಿವು ನೀಡಿದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 5:32 IST
Last Updated 18 ಅಕ್ಟೋಬರ್ 2022, 5:32 IST
ಬೊಮ್ಮಾಯಿ
ಬೊಮ್ಮಾಯಿ   

ಬೆಂಗಳೂರು: ‘ಜನಸಂಕಲ್ಪ ಯಾತ್ರೆಯ ಮಧ್ಯೆಯೇ, ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ಕೊಟ್ಟ ತಕ್ಷಣವೇ ದೆಹಲಿಗೆ ಹೋಗುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ಆಗಲಿದೆ'ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೀಡಿರುವ ಹೇಳಿಕೆ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ವರಿಷ್ಠರ ಜೊತೆ ಚರ್ಚಿಸಲು ಈ ವಾರವೇ ದೆಹಲಿಗೆ ಹೋಗಲು ನಿರ್ಧರಿಸಿದ್ದೇನೆ’ ಎಂದರು.

ಶಾಸಕ ರಮೇಶ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅವರು ಅವರ ಕ್ಷೇತ್ರದ ಹಲವು ಕೆಲಸಕ್ಕೆ ಬಂದಿದ್ದರು. ಆರ್‌ಡಿಪಿಆರ್‌ ಮತ್ತು ಲೋಕೋಪಯೋಗಿ ರಸ್ತೆಗಳ ಬಗ್ಗೆ ಮಾತನಾಡಲು ಬಂದಿದ್ದರು’ ಎಂದರು.

ADVERTISEMENT

ಒಕ್ಕಲಿಗ ಸಮುದಾಯಕ್ಕೆ ಶೇ 12ರಷ್ಟು ಮೀಸಲಾತಿ ನೀಡುವಂತೆ ನಿರ್ಮಲಾನಂದನಾಥ ಶ್ರೀಗಳು ಬೇಡಿಕೆ ಇಟ್ಟಿರುವ ಬಗ್ಗೆ ಮಾತನಾಡಿದ ಅವರು, ‘ಯಾವುದೇ ಸಮುದಾಯ ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಅದಕ್ಕೆ ಕಾನೂನು ಚೌಕಟ್ಟಿದೆ. ಬೇರೆ ಬೇರೆ ತೀರ್ಪುಗಳಿವೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇದೆ. ಅವುಗಳ ಆಧಾರದಲ್ಲಿ ಮಾಡಬೇಕಾಗುತ್ತದೆ’ ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ

‘ನಗರದ ಲುಲು ಗ್ಲೋಬಲ್‌ ಮಾಲ್‌ ಬಳಿ ಸೋಮವಾರ ಸಂಭವಿಸಿದ ಅಫಘಾತ ಯಾವ ಕಾರಣಕ್ಕೆ ನಡೆದಿದೆ ಎಂದು ತನಿಖೆ ನಡೆಸಿ ಪ್ರಾಥಮಿಕ ವರದಿ ನೀಡುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ‘ ಎಂದೂ ಮುಖ್ಯಮಂತ್ರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.