ADVERTISEMENT

ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತೇನೆ: ಸದನದಲ್ಲಿ ಎಚ್‌ಡಿಕೆ ಮಾತು

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 13:17 IST
Last Updated 23 ಜುಲೈ 2019, 13:17 IST
   

ಬೆಂಗಳೂರು:‘ನಾಡಿನ ಜನತೆ ನಮ್ಮನ್ನು ಕ್ಷಮಿಸಲಾರರು. ಕುಮಾರಸ್ವಾಮಿ ಕುರ್ಚಿಗೆ ಅಂಟಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಅನೇಕ ಜನ ಅಂದುಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸಂಜೆ 5.25ಕ್ಕೆ ಭಾಷಣ ಆರಂಭಿಸಿದರು.

ಭಾಷಣದ ಬಳಿಕ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದು ಎನ್ನುವ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ‘ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಇವತ್ತು ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತಿದ್ದೇನೆ. ಯಾವುದೂ ಬೇಕಾಗಿಲ್ಲ ನನಗೆ’ ಎನ್ನುವ ಮುಖ್ಯಮಂತ್ರಿಯ ಮಾತು ಪರೋಕ್ಷವಾಗಿ ರಾಜೀನಾಮೆಯನ್ನೇ ಸಂಕೇತಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

‘ವಿಶ್ವಾಸಮತ ನಿರ್ಣಯದ ಚರ್ಚೆಗೆ ನಾಲ್ಕು ದಿನ ತೆಗೆದುಕೊಂಡಿದ್ದರ ಹಿಂದೆ ನಮ್ಮ ಸ್ವಾರ್ಥ ಇರಬಹುದು. ಸ್ವಾರ್ಥ ಅನ್ನೋದಕ್ಕಿಂತಲೂ ಅತೃಪ್ತರಿಗೆ ಜ್ಞಾನೋದಯ ಆಗಬಹುದೆಂಬ ನಿರೀಕ್ಷೆ ಇತ್ತು. ನಿನ್ನೆ ನಿಮ್ಮ (ಸಭಾಧ್ಯಕ್ಷರ) ಮನಸಿಗೆ ಆಗಿರುವ ನೋವಿಗಾಗಿ ಎಲ್ಲರ ಪರವಾಗಿ ಕ್ಷಮೆ ಯಾಚಿಸುತ್ತೇನೆ. ರಾಜ್ಯದ ಆರೂವರೆ ಕೋಟಿ ಜನರ ಕ್ಷಮೆಯನ್ನೂ ಯಾಚಿಸುತ್ತೇನೆ. ಕಳೆದ 10 ದಿನಗಳಿಂದ ನಡೆದ ಘಟನೆಯ ಬಗ್ಗೆ ಮತ್ತೆ ಚರ್ಚೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

ADVERTISEMENT

ಸರ್ಕಾರ ಉರುಳಿಸುವ ಪಿತಾಮಹ ಎಂದು ದೇವೇಗೌಡರನ್ನು ಟೀಕಿಸಲಾಗುತ್ತಿದೆ. ನಮ್ಮ ಬಗ್ಗೆ ಏನು ಬೇಕಾದರೂ ಹೇಳಿ. ಆದರೆ ಅವರ ಬಗ್ಗೆ ಅಷ್ಟು ಹಗುರವಾಗಿ ಮಾತನಾಡಬೇಡಿ’ ಎಂದು ಮನವಿ ಮಾಡಿಕೊಂಡರು.

ಭಾಷಣದುದ್ದಕ್ಕೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು ತಮ್ಮ ಹಿನ್ನೆಲೆ, ರಾಜಕೀಯ ಪ್ರವೇಶಿಸಿದ ರೀತಿ, ಹಿಂದಿನ ಸರ್ಕಾರಗಳಲ್ಲಿ ನಿರ್ವಹಿಸಿದ ಪಾತ್ರಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದರು. ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಪೋಸ್ಟ್‌ಗಳನ್ನು ಪ್ರಸ್ತಾಪಿಸಿ, ‘ಸಾಮಾಜಿಕ ಮಾಧ್ಯಮಗಳಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ. ಮನಸ್ಸಿಗೆ ಬಂದಂತೆ ಹಾಕುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿರೋಧ ಪಕ್ಷದ ಸಾಲಿನಿಂದ ಒಬ್ಬರೂ ಚರ್ಚೆಯಲ್ಲಿ ಭಾಗಿಯಾಗದೇ ಇರುವುದು ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲು ಇರಬಹುದು’ ಎಂದು ಸದನದಲ್ಲಿ ಬಿಜೆಪಿ ವರ್ತಿಸಿದ ರೀತಿಯನ್ನು ಲೇವಡಿ ಮಾಡಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತಬರಲಿಲ್ಲ. ಹೀಗಾಗಿ 2018 ಮೇ 23ರಂದು ಮೈತ್ರಿ ಸರ್ಕಾರ ರಚನೆಯಾಯಿತು. ಇದು ಅಪವಿತ್ರ ಮೈತ್ರಿ ಎಂದು ಅನೇಕ ಬಾರಿ ಪ್ರತಿಪಕ್ಷದ ನಾಯಕರು ಟೀಕಿಸಿದ್ದರು. ಮೈತ್ರಿ ಸರ್ಕಾರ ರಚನೆ ಮಾಡಿದ ಮೊದಲ ದಿನದಿಂದಲೂ ಅಭದ್ರ ಸರ್ಕಾರ ಎಂದೇ ಮಾಧ್ಯಮಗಳು ಬಿಂಬಿಸುತ್ತಾ ಬಂದವು. ಅಭದ್ರ ಸರ್ಕಾರ ಎಂದು ಪದೇಪದೆ ಹೇಳಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು? ಇಷ್ಟೆಲ್ಲದರ ನಡುವೆಯೂ ನಾನೇನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಅಧಿಕಾರಿಗಳ ಸಹಕಾರ ಕಾರಣ’ ಎಂದು ಕೃತಜ್ಞತೆ ಸಲ್ಲಿಸಿದರು.

‘ಪದೇಪದೇ ನನ್ನನ್ನು ವಚನ ಭ್ರಷ್ಟ ಎಂದು ಹೇಳಬೇಡಿ. ಕೈಮುಗಿದು ಕೇಳಿಕೊಳ್ಳುತ್ತೇನೆ. ನಾನು ವಚನ ಭ್ರಷ್ಟತೆ ಮಾಡಿಲ್ಲ.ಇವತ್ತು ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತಿದ್ದೇನೆ. ಯಾವುದೂ ಬೇಕಾಗಿಲ್ಲ ನನಗೆ. ಅಂದು ಹೇಳಿದಂತೆಯೇ ಇಂದೂ ನನ್ನನ್ನು ವಚನ ಭ್ರಷ್ಟ ಎಂದು ಹೇಳಿದ್ದೀರಿ. ನಿಮ್ಮ ಆತ್ಮವನ್ನು (ಬಿಜೆಪಿ ನಾಯಕರನ್ನು ಉದ್ದೇಶಿಸಿ) ನೀವು ಪ್ರಶ್ನಿಸಿಕೊಳ್ಳಿ’ ಎಂದರು.

‘ವಿದ್ಯುನ್ಮಾನ ಮಾಧ್ಯಮಗಳ ಕಾರ್ಯನಿರ್ವಹಣೆ ಬಗ್ಗೆ ನನಗೆ ಅಸಮಾಧಾನವಿದೆ.ಮುದ್ರಣ ಮಾಧ್ಯಮ ಸ್ವಲ್ಪ ಮಟ್ಟಿಗೆ ನೈತಿಕತೆ ಉಳಿಸಿಕೊಂಡಿದೆ. ಈ ಸುದ್ದಿವಾಹಿನಿಗಳ ವರದಿಯಿಂದ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ‘ಜೆಡಿಎಸ್ ಶಾಸಕರಿಗೆ ಸ್ವಾಗತ, ಯೋಗ್ಯತೆ ತಕ್ಕ ಸ್ಥಾನಮಾನ ನೀಡಲಾಗುವುದು’ ಎನ್ನುವ ಶಾಸಕ ಸಿ.ಟಿ.ರವಿ ಅವರ ಟ್ವೀಟ್ ಪ್ರಸ್ತಾಪಿಸಿದ ಅವರು, ‘ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮತ್ತು ಕೆಟ್ಟ ಸಂದೇಶ ಕಳುಹಿಸುವ ಯೋಗ್ಯತೆಯೇ ತಾನೆ ನಿಮಗೆ ಬೇಕಿರುವುದು’ ಎಂದು ಹರಿಹಾಯ್ದರು.

‘ವಿಶ್ವನಾಥ್ ಅವರು ಸಾ.ರಾ.ಮಹೇಶ್ ಬಗ್ಗೆ ಬಳಸಿರುವ ಪದದ ಬಗ್ಗೆಯೂ ಮುಖ್ಯಮಂತ್ರಿಆಕ್ಷೇಪ ವ್ಯಕ್ತಪಡಿಸಿದರು.ಮಹೇಶ್ ಏನೆಂಬುದು ನನಗೆ ಗೊತ್ತು. ದೇಶದ ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ನಿಲ್ಲಿಸಲು ಹೇಳಿ. ಇದೇನಾದೇಶೋದ್ಧಾರದ ಕೆಲಸ’ ಎಂದು ಪ್ರಶ್ನಿಸಿದರು.

‘1999ರಲ್ಲಿ ನನಗೆ ಅಲ್ಲಿಯ ಕಾರ್ಯಕರ್ತರು ಒತ್ತಡ ಹಾಕಿದರು. ಅದರಂತೆ ಶಿವಕುಮಾರ್ ಎದುರು ಸ್ಪರ್ಧಿಸಿ ಸೋತೆ. ಅದಾದ ಬಳಿಕ ರೇವಣ್ಣ ಮಂತ್ರಿಯಾಗಿ ಸೋತಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿ ಸೋತಿದ್ದರು. ನಾನೂ ಸೋತಿದ್ದೆ. ಆಗಲೇ ರಾಜಕೀಯದಿಂದ ದೂರ ಸರಿಯಬೇಕು ಎಂದುಕೊಂಡಿದ್ದೆ. ಆದರೆ ಕಾರ್ಯಕರ್ತರ ಒತ್ತಾಸೆಗೆ ಮಣಿದು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು’ ಎಂದು ನೆನಪಿಸಿಕೊಂಡರು.

‘ನಾನು ರಾಜಕೀಯಕ್ಕೆ ಬರುವುದಕ್ಕೆ ತಂದೆಯವರಿಂದಲೂ ವಿರೋಧವಿತ್ತು. ಆದರೆ ರೇವಣ್ಣ ಅವರ ರಾಜಕೀಯ ಜೀವನಕ್ಕೆ ಆಶೀರ್ವಾದವಿತ್ತು. ರೇವಣ್ಣ ತುರ್ತು ಪರಿಸ್ಥಿತಿ ಸಮಯದಿಂದಲೂ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇತರ ನಾಯಕರ ಒತ್ತಾಯದ ಮೇರೆಗೆ ಲೋಕಸಭೆ ಚುನಾವಣೆ ಸ್ಪರ್ಧಿಸುವಂತಾಯಿತು. ಅಲ್ಲಿಂದ ನನ್ನ ರಾಜಕೀಯ ಜೀವನ ಆರಂಭವಾಯಿತು’ ಎಂದು ಹೇಳಿದರು.

ಭಾಷಣದಲ್ಲಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ ಕುಮಾರಸ್ವಾಮಿ. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ರೈತ ಎಂದು ಹೇಳಿಕೊಳ್ಳುತ್ತಿದ್ದರು ಎಂದು ಇಂದಿನಪ್ರಜಾವಾಣಿ ವರದಿಯಲ್ಲಿ ಉಲ್ಲೇಖವಾಗಿದೆ.ದೇವೇಗೌಡರ ರೈತ ಪರ ಹೋರಾಟ ನಮಗೆ ಮಾದರಿ ಎಂದರು.

ದೇವರಾಜ ಆರಸು ಮುಖ್ಯಮಂತ್ರಿಯಾಗಿ, ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಡೆದ ಚರ್ಚೆ, ಸದನ ನಡೆದ ರೀತಿಯನ್ನು ಮುಂದಿನ ಪೀಳಿಗೆ ಮಾದರಿಯಾಗಿ ಸ್ವೀಕರಿಸಬಹುದು ಎಂದು ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರು ಲೇಖನದಲ್ಲಿ ಉಲ್ಲೇಖಿಸಿದ್ದರು ಅದೆಲ್ಲವನ್ನೂ ನಾನು ಓದಿಕೊಂಡಿದ್ದೇನೆ ಎಂದರು.

‘ಎಚ್.ವಿಶ್ವನಾಥ್ ಅವರ ಆರೋಪಗಳಿಂದ ತೀವ್ರ ಬೇಸರವಾಗಿದೆ. ರಾಕ್ಷಸ ರಾಜಕಾರಣದ ಆರೋಪ ಮಾಡಿದ್ದಾರೆ. ವಿಶ್ವಾಸಮತ ಮುಗಿಯದೆ ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಎಲ್ಲ ನನ್ನ ವಿರುದ್ಧ ಆರೋಪ ಮಾಡಿದ ವಿಶ್ವನಾಥ್ ಅವರನ್ನು ಸಂಸದೀಯ ಪಟು ಅಂತ ಕರೆಯಬೇಕಾ? ಅವರಿಂದ ಅಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ’ ಎಂದರು.

‘ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ, ಭೂಕುಸಿತವಾಗಿದ್ದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೇವೆ. ಅಲ್ಲಿನ ಜನ ನಮಗೆ ಮತ ನೀಡಿಲ್ಲವೆಂದು ನಾವು ಸಹಾಯ ಮಾಡದೇ ಉಳಿಯಲಿಲ್ಲ. ಈ ಸರ್ಕಾರ ಜನಪರ ಎಂಬ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ.ಉತ್ತಮ ಕಾಲುಸಂಕ ನಿರ್ಮಾಣಕ್ಕೆ ₹187 ಕೋಟಿ ಅನುದಾನ ಇಟ್ಟಿದ್ದೇವೆ. ಇದು ತಪ್ಪೇ?‘ಕಿಸಾನ್ ಸಮ್ಮಾನ್ ಯೋಜನೆಗೆ ಸಹಕಾರ ಕೊಟ್ಟಿಲ್ಲ ಎಂಬ ಕೇಂದ್ರದ ಆರೋಪ ನಿರಾಧಾರ. 35 ಲಕ್ಷ ರೈತ ಕುಟುಂಬದ ಮಾಹಿತಿ ಕೊಟ್ಟಿದ್ದೇವೆ ಬಜೆಟ್ ಮಂಡನೆ ವೇಳೆಯೂ ನನಗೆ ತೀವ್ರ ತೊಂದರೆ ಕೊಡಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ತಪ್ಪು ಮಾಡಿದ್ದರೆ ಟೀಕಿಸಿ, ತೊಂದರೆಯಿಲ್ಲ. ಒಳ್ಳೆ ಕೆಲಸ ಮಾಡಿದರೆ ಗುರುತಿಸಿ. ನಮ್ಮ ಸರ್ಕಾರ ನಿರ್ಲಜ್ಜ ಸರ್ಕಾರ ಅಲ್ಲ. ಅಂತಹ ಕೆಲಸ ನಾವೇನು ಮಾಡಿದ್ದೇವೆ ಎಂದು ಪ್ರಶ್ನಿಸಿದರು.

‘ತಾಜ್ ವೆಸ್ಟ್‌ಎಂಡ್ ಹೋಟೆಲ್‌ನ ಆ ಕೊಠಡಿಯಲ್ಲಿ ಕುಳಿತಿದ್ದಾಗಲೇ ಸರ್ಕಾರ ರಚಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೂರವಾಣಿ ಕರೆ ಬಂತು. ಆ ಕಾರಣಕ್ಕೆ ಅದು ಅದೃಷ್ಟದ ಕೊಠಡಿ ಎಂಬ ಭಾವನೆಯಿಂದ ಅಲ್ಲಿಂದಲೇ ಆಡಳಿತ ನಡೆಸುತ್ತಿದ್ದೆ. ಅಲ್ಲಿದ್ದುಕೊಂಡು ಒಂದೇ ಒಂದು ಅವ್ಯವಹಾರ ನಡೆಸಿದ್ದರೆ ದಾಖಲೆ ಸಮೇತ ನೀಡಿ, ಎದುರಿಸಲು ಸಿದ್ಧನಿದ್ದೇನೆ. ಸರ್ಕಾರಿ ಕಾರನ್ನೂ ನಾನು ಬಳಸುತ್ತಿಲ್ಲ. ಸರ್ಕಾರದ ಬಂಗ್ಲೆಯನ್ನೂ ಪಡೆದಿಲ್ಲ’ ಎಂದುಬಿಜೆಪಿ ಆರೋಪಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

‘₹25 ಸಾವಿರ ಕೋಟಿ ಹಣವನ್ನು ರೈತರ ಸಾಲಮನ್ನಾಕ್ಕೆ ತೆಗೆದಿಟ್ಟಿದ್ದೇವೆ. ರೈತರ ವಿಚಾರದಲ್ಲಿ ನಾನು ಮೋಸ ಮಾಡಲಾರೆ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಹಮ್ಮಿಕೊಂಡಿದ್ದ ಎಲ್ಲ ಯೋಜನೆ ಮುಂದುವರಿಸಿದ್ದೇನೆ. ಆಧಾರ್, ಪಡಿತರ ಕಾರ್ಡ್ ಮಾಹಿತಿ ನೀಡುವಂತೆ ರೈತರಿಗೆ ಕೇಳಿದ್ದೇವೆ. ಅದನ್ನು ನೀಡಿದವರ ಸಾಲ ಮನ್ನಾ ಮಾಡಿದ್ದೇವೆ. ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾವನ್ನೂ ನಾವು ತೀರಿಸಿದ್ದೇವೆ. ಯಾವುದೋ ಸಮಸ್ಯೆಗಳಿಗೆ ನಾನು ಹೊಣೆಯೇ? ಮನೆಕಟ್ಟಿದ ಸಾಲ ಸೇರಿದಂತೆ ಇತರ ಎಲ್ಲ ಸಾಲಗಳನ್ನೂ ನಾನೇ ತೀರಿಸಬೇಕು ಎಂದು ಹೇಳಲಾಯಿತು. ಇದು ಸರಿಯೇ?

‘ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ವಿಚಾರವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು.ಇಂತಹ ಪರಿಸ್ಥಿತಿಯಲ್ಲೂ ಉತ್ತಮ ಆಡಳಿತ ನೀಡಲು ಪ್ರಯತ್ನಿಸಿದೆ. ನನ್ನ ಕಾರ್ಯವೈಖರಿ ನೋಡಿ ಅಧಿಕಾರಿಗಳೂ ಉತ್ತಮವಾಗಿ ಕೆಲಸ ಮಾಡಿದರು’ ಎಂದು ಸ್ಮರಿಸಿಕೊಂಡರು.

‘ಗೋಪಾಲಯ್ಯ ನಮ್ಮದೇ ಪಕ್ಷದ ಶಾಸಕರು. ಅವರು ತಮ್ಮ ಕುಟುಂಬದಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ರಕ್ಷಣೆ ಕೊಡಲಿಲ್ಲ ಅಂತ ದೂರ ಹೋಗಿದ್ದಾರೆ. ಅಂಥವರನ್ನು ಕಾಪಾಡಲು ನಾನು ಸರ್ಕಾರ ನಡೆಸಬೇಕೆ?’ ಎಂದು ಪ್ರಶ್ನಿಸಿದರು.

‘ಐಎಂಎ ಪ್ರಕರಣದಲ್ಲಿ ಸಿಲುಕಿರುವ ಶಾಸಕರು ಇವರನ್ನು ಮುಖ್ಯಮಂತ್ರಿ ಮಾಡಲು ಮುಂದೆ ಬಂದಿದ್ದಾರೆ. ಬಡವರ ಹಣ ಲೂಟಿ ಮಾಡಿದ್ದು ಬಿಟ್ಟುಬಿಟ್ರು. ಈ ಸರ್ಕಾರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಅರೆಸ್ಟ್ ಮಾಡಿಸು ಹೋದರು ಅಂತ ಹೇಳಿಕೆ ಕೊಟ್ಟಿದ್ದಾರೆ’ ಇದು ಸರಿಯಾ?’ ಎಂದು ಪ್ರಶ್ನಿಸಿದರು.

ಐಎಂಎ ಮನ್ಸೂರ್‌ಖಾನ್‌ನನ್ನು ದುಬೈನಿಂದ ಕರೆದು ತಂದಿದ್ದು ನಮ್ಮ ರಾಜ್ಯ ಸರ್ಕಾರದ ಅಧಿಕಾರಿಗಳು. ಅವನನ್ನು ರಾಜತಾಂತ್ರಿಕ ಅನುಮತಿ ಮೇರೆಗೆ ಕರೆತರಲಾಯಿತು. ದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕರೆದೊಯ್ದರು.ಏಕೆ ಕರೆದೊಯ್ದರು? ಯಾರ್ಯಾರನ್ನು ಹೊಸದಾಗಿ ಫಿಕ್ಸ್ ಮಾಡ್ತೀರಿ ಸ್ವಾಮಿ?’ ಎಂದು ಕೇಂದ್ರ ಸರ್ಕಾರದ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.