ಬೆಂಗಳೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ರೋಹಿಣಿ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಕಿಡಿಕಾರಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್, ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಈ ಆರೋಪಗಳಿಗೆ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಂಧೂರಿ, ಮಾನಸಿಕ ಅಸ್ವಸ್ಥತೆ ಬಹುದೊಡ್ಡ ಸಮಸ್ಯೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ವರ್ತಿಸುವುದು ಅಪಾಯಕಾರಿ. ಡಿ.ರೂಪಾ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ನನ್ನ ಮೇಲೆ ಹಗೆ ತೀರಿಸಿಕೊಳ್ಳಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು, ವೈಯಕ್ತಿಕ ಹಗೆಯನ್ನಿಟ್ಟುಕೊಂಡು ನನ್ನ ವಿರುದ್ಧ ಸುಳ್ಳು ಹಾಗೂ ವೈಯಕ್ತಿಕ ನಿಂದನೆಯ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ತೆಗೆದ ಫೋಟೊಗಳನ್ನು ನನ್ನ ತೇಜೋವಧೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಫೋಟೊಗಳನ್ನು ನಾನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎಂದು ಆರೋಪಿಸಿರುವ ರೂಪಾ, ಸದರಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ವಿಸ್ ಕಂಡಕ್ಟ್ ರೂಲ್ಸ್ (ಸೇವಾ ನಡತೆ ನಿಯಮ) ಉಲ್ಲಂಘಿಸಿರುವ ರೂಪಾ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುತ್ತೇನೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ.
ನನ್ನ ವಿರುದ್ಧ ಮಾಡಿರುವ ಆರೋಪಗಳಿಂದ ನಾನು ಸ್ವಲ್ಪವೂ ವಿಚಲಿತಳಾಗುವುದಿಲ್ಲ. ಕರ್ತವ್ಯವನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ಮುಂದುವರಿಸುತ್ತೇನೆ ಎಂಬುದನ್ನು ಇಂತಹ ಕ್ಷುಲ್ಲಕ ವ್ಯಕ್ತಿಗಳಿಗೆ ತಿಳಿಸಲು ಬಯಸುತ್ತೇನೆ ಎಂದೂ ತಿರುಗೇಟು ನೀಡಿದ್ದಾರೆ.
ಇವನ್ನೂ ಓದಿ
* ರೋಹಿಣಿ ಸಿಂಧೂರಿ ಖಾಸಗಿ ಫೋಟೊಗಳನ್ನು ಫೇಸ್ಬುಕ್ನಲ್ಲಿ ಬಹಿರಂಗಪಡಿಸಿದ ಡಿ. ರೂಪಾ!
* ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ 19 ಆರೋಪ : ಡಿ.ಕೆ ರವಿ ಹೆಸರೂ ಪ್ರಸ್ತಾಪ
* ರೋಹಿಣಿ ನೈತಿಕತೆ ಪತನ: ಈಜುಕೊಳ ನಿರ್ಮಾಣದ ಬಗ್ಗೆ ಐಪಿಎಸ್ ಅಧಿಕಾರಿ ರೂಪಾ ಟೀಕೆ
ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆ ಇಲ್ಲಿದೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.