ADVERTISEMENT

ಇಬ್ರಾಹಿಂ ಸುತಾರ: ಭಾವೈಕ್ಯ ಪಸರಿಸಿದ ಪ್ರವಚನಕಾರ

ಇಬ್ರಾಹಿಂ ಸುತಾರ ಅವರ ಪ್ರವಚನ ಕೇಳಿದ್ದ ಜನ ಮನೆ ಕಟ್ಟಿಸಿಕೊಟ್ಟರು!

ಡಾ.ಬಿ.ಎಂ.ಪಾಟೀಲ
Published 5 ಫೆಬ್ರುವರಿ 2022, 19:30 IST
Last Updated 5 ಫೆಬ್ರುವರಿ 2022, 19:30 IST
ಮಹಾಲಿಂಗಪುರದಲ್ಲಿ ಇಬ್ರಾಹಿಂ ಸುತಾರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಾರ್ವಜನಿಕರು
ಮಹಾಲಿಂಗಪುರದಲ್ಲಿ ಇಬ್ರಾಹಿಂ ಸುತಾರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಾರ್ವಜನಿಕರು   

ಬಾಗಲಕೋಟೆ: ಅದು 80ರ ದಶಕದ ಕೊನೆಯ ಘಟ್ಟ. ಶ್ರಾವಣದ ಸಂಜೆಗಳಲ್ಲಿ ಮಹಾಲಿಂಗಪುರದ ವೇದಾಂತ ಪರಿಷತ್‌ನ ವೇದಿಕೆಗೆ ಭಜನಾ ತಂಡ ಕಳೆಗಟ್ಟುತ್ತಿತ್ತು. ತಂಡದ ಹಿರಿಯ ಮಲ್ಲಪ್ಪ ಶಿರೋಳ ಸವಾಲು ಹಾಕುತ್ತಿದ್ದರೆ, ಇಬ್ರಾಹಿಂ ಸುತಾರ ಜವಾಬು ಕೊಡುತ್ತಿದ್ದರು.
ಈ ಸವಾಲು–ಜವಾಬು ಕೇಳಲು ಜನರು ಕಿಕ್ಕಿರಿದು ಸೇರುತ್ತಿದ್ದರು, ಆದರೆ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಶಬ್ದ ಆವರಿಸುತ್ತಿತ್ತು.

ಅಲ್ಲಿಯವರೆಗೆ ಭಜನೆ ಅಂದರೆ ತಾಳ, ಲಯಬದ್ಧ ಹಾಡುಗಾರಿಕೆಯ ಮೇಳ. ಅದಕ್ಕೆ ಇಬ್ರಾಹಿಂ ಸುತಾರ ಹಾಗೂ ಮಲ್ಲಪ್ಪ ಶಿರೋಳ ಸೇರಿ ತಾತ್ವಿಕ ಸ್ಪರ್ಶ ನೀಡಿದ್ದರಿಂದ
ಸಂವಾದದ ಹೊಸ ರೂಪ ಕಾಣಿಸಿತ್ತು. ಒಬ್ಬರದ್ದು ಪ್ರಶ್ನೆ, ಮತ್ತೊಬ್ಬರದ್ದು ಉತ್ತರ ಬಹಳ ಜನರಿಗೆ ಹಿಡಿಸಿತು. ಜನಸಾಮಾನ್ಯರಲ್ಲಿನ ಗೊಂದಲ, ತೊಳಲಾಟ, ಕ್ಲೀಷೆಗಳು ಸವಾಲು ರೂಪ ತಾಳಿ, ಅದಕ್ಕೆ ಅಲ್ಲಿಯೇ ಸರಳ ಭಾಷೆಯಲ್ಲಿ ಜವಾಬು ಸಿಗುತ್ತಿತ್ತು. ಇದು ಸುತಾರ ಅವರಲ್ಲಿನ ತಿಳಿವಳಿಕೆ ಒರೆಗಚ್ಚಿದ ಮೊದಲ ವೇದಿಕೆ.

ನಾವು ಎಲ್ಲಿಯೇ ಕಾರ್ಯಕ್ರಮಕ್ಕೆ ಹೋದರೂ ಆ ಊರಿನ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿದಾಗ ಆ ಕಡೆ ಈ ಕಡೆಯಿಂದ ಯಾರಾದರೂ ನಾಲ್ಕಾರು ಜನರು ಬಂದು ಸುತಾರ ಕಾಲಿಗೆ ನಮಸ್ಕರಿಸುತ್ತಿದ್ದರು. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶೇಗುಣಸಿಗೆ ನಿರಂತರವಾಗಿ ಪ್ರವಚನಕ್ಕೆ ಹೋಗುತ್ತಿದ್ದರು. ಊರಿನಲ್ಲಿ ಸ್ವಚ್ಛತೆ ಅರಿವು, ರಸ್ತೆ ನಿರ್ಮಾಣಕ್ಕೂ ಇದು ಪ್ರೇರಣೆಯಾಗಿತ್ತು. ಆ ಊರಿನ ಜನರು ಸುತಾರ ಅವರಿಗೆ ಮಹಾಲಿಂಗಪುರದಲ್ಲಿ ಮನೆ ಕಟ್ಟಿಸಿಕೊಟ್ಟರು. ಅದಕ್ಕೆ ‘ಭಾವೈಕ್ಯ’ ಎಂದೇ ಹೆಸರಿಟ್ಟರು. ಸಾಮಾನ್ಯ ಜನರು ತೋರುತ್ತಿದ್ದ ಪ್ರೀತಿ ಆಶ್ಚರ್ಯ ಮೂಡಿಸಿತ್ತು.

ADVERTISEMENT

ಬೀದರ್‌ನಲ್ಲಿಫ.ಗು. ಹಳಕಟ್ಟಿ ಹೆಸರಿನ ವಚನೋತ್ಸವದಲ್ಲಿ ಇಬ್ರಾಹಿಂ ಸುತಾರ ಲಿಂಗದೀಕ್ಷೆ ಬಗ್ಗೆ ಮಾತಾಡಿದ್ದರು. ನಾನು ಲಿಂಗಾಯತ ಆಗಿಯೂ ಲಿಂಗದೀಕ್ಷೆ ಬಗ್ಗೆ ನನಗಷ್ಟು ಗೊತ್ತಿರಲಿಲ್ಲ. ಆದರೆ ಒಬ್ಬ ಮುಸ್ಲಿಂ ಲಿಂಗದೀಕ್ಷೆ ಬಗ್ಗೆ ಮಾತನಾಡಿ ಲಿಂಗವನ್ನು ಏಕೆ ಕಟ್ಟಿಕೊಳ್ಳುತ್ತಾರೆ? ದೀಕ್ಷೆಯ ಸಂಸ್ಕಾರವೇನು ಎಂದು ಹೇಳಿದಾಗ ಅಲ್ಲಿ ನೆರೆದಿದ್ದ ದೊಡ್ಡ ಸಮುದಾಯ ಹುಚ್ಚೆದ್ದು ಕುಣಿದಿತ್ತು. ಸುತಾರ ಶರಣ ಸಾಹಿತ್ಯ ಮಾತ್ರವಲ್ಲ ದಾಸರ ಕೀರ್ತನೆ, ವೇದ ಉಪನಿಷತ್‌ಗಳ ಸಾರವನ್ನು ಒಂದು ಹಾಳೆಯ ನೆರವಿಲ್ಲದೆ ಹೇಳುತ್ತಿದ್ದರು. ಕಲಿತದ್ದು ಉರ್ದು ಮೂರನೇ ಇಯತ್ತೆ. ಕನ್ನಡದ ಬಗ್ಗೆ ಒಲವು ತೆಗೆದುಕೊಂಡು ವೇದ, ಉಪನಿಷತ್ತು, ಸಂಸ್ಕೃತ ಅರ್ಥ ಮಾಡಿಕೊಂಡದ್ದು ನನಗೆ ಅದ್ಭುತ ಅನ್ನಿಸಿತ್ತು. ಶಾಲೆಗೆ ಹೋಗದೇ ಅವರಿಗೆ ಇದು ಸಾಧ್ಯವಾಗಿತ್ತು.

ಪೂರ್ತಿ ತಮ್ಮ ಧರ್ಮವನ್ನು ಬಿಡಲಿಲ್ಲ. ಉಳಿದ ಧರ್ಮಗಳ ಬಗ್ಗೆಯೂ ಆಸಕ್ತಿ ತೆಗೆದುಕೊಂಡು ಸಮಾನವಾಗಿ ಕಂಡರು. ಮಹಾಲಿಂಗ ಪುರದ ಸಹಜಾನಂದ ಸ್ವಾಮೀಜಿ, ಇಬ್ರಾಹಿಂ ಸುತಾರ ಕೋಲಿಯೊಳಗೆ ಒಟ್ಟಿಗೆ ಪ್ರವಚನಕ್ಕೆ ಕೂರುತ್ತಿದ್ದರು. ಸಹಜಾನಂದರು ಒಂದೆಡೆ
ಲಿಂಗಾಯತ ಧರ್ಮದ ಬಗ್ಗೆ ಪ್ರವಚನ ಮಾಡುತ್ತಿದ್ದರು. ಇನ್ನೊಂದು ಮೂಲೆ ಯಲ್ಲಿ ಸುತಾರ ಕುಳಿತು ನಮಾಜ್ ಮಾಡುತ್ತಿದ್ದರು. ಇದು ಅವರ ಭಾವೈಕ್ಯದ ಗುಣ.

ವೇದಾಂತ ಪರಿಷತ್‌ಗೆ ಬೀದರ್‌ನ ಶಿವಕುಮಾರ ಸ್ವಾಮೀಜಿ, ಧರೂರಿನ ಶಂಭುಲಿಂಗ ಸ್ವಾಮೀಜಿ ತಿಂಗಳುಗಟ್ಟಲೇ ಪ್ರವಚನಕ್ಕೆ ಬರುತ್ತಿದ್ದರು. ಇಬ್ರಾಹಿಂ ಸುತಾರ ವೇದಿಕೆಯ ಒಂದು ದಂಡೆಯಲ್ಲಿ ನಿಂತು ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದರು. ಅವರಿಬ್ಬರ ಪ್ರಭಾವ, ಸಂಸ್ಕಾರ ಇವರ ಮೇಲೆ ಆಯ್ತು. ಮುಂದೆ ಪ್ರವಚನದಲ್ಲಿ ಅವರನ್ನು ಮೀರಿಸುವಷ್ಟು ಪ್ರವೀಣರಾದರು.

ಇಬ್ರಾಹಿಂ ಸುತಾರ ಅವರಿಗೆ 75 ವರ್ಷ ತುಂಬಿದಾಗ ‘ಭಾವೈಕ್ಯ ದರ್ಶನ’ ಹೆಸರಿನಲ್ಲಿ 600 ಪುಟದ ಅಭಿನಂದನಾ ಗ್ರಂಥ ಸಿದ್ಧಪಡಿಸಿದ್ದೆನು. ಅದರ ಪ್ರಕಟಣೆಗೆ ಯಾರೋ ಒಬ್ಬರು ₹2.25 ಲಕ್ಷ ಕೊಟ್ಟಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಭಿನಂದನೆ ವೇಳೆ, ‘ಸುತಾರಹಳ್ಳಿಯೊಳಗೆಲ್ಲ ಅಡ್ಡಾಡಿ ಪ್ರವಚನ ಮಾಡಿ ಕೊಂಡು ಬರುತ್ತಾರೆ. ಅವರಿಗೆ ಇನ್ನು ವಯಸ್ಸಾಯ್ತು. ಬಸ್ ಹತ್ತಿ ಹೋಗೋದು ಮಾಡೋದು ಸಾಧ್ಯ ಆಗಂಗಿಲ್ಲ. ಒಂದು ಕಾರು ಕೊಡೋಣ’ ಎಂದು ವೇದಿಕೆಯಲ್ಲಿ ಹೇಳಿದ್ದೆನು. ಅಭಿಮಾನಿಯೊಬ್ಬರು ಅವರಿಗೆ ಅಲ್ಲಿಯೇ ₹8.5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಕೊಟ್ಟಿದ್ದರು. ನನಗೆ ಅನ್ನಿಸಿದ ಮಟ್ಟಿಗೆ ಇಡೀ ಕರ್ನಾಟಕದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸನ್ಮಾನ ಮಾಡಿ ಕಾರು ಕೊಟ್ಟದ್ದು ಅಲ್ಲಿಯೇ ಮೊದಲು.

(ಲೇಖಕರು:ಮಹಾಲಿಂಗಪುರದ ಕೆಎಲ್‌ಇ ಕಾಲೇಜಿನ ಪ್ರಾಚಾರ್ಯ, ಇಬ್ರಾಹಿಂ ಸುತಾರ ಅವರಿಗೆ 36 ವರ್ಷಗಳಿಂದ ಒಡನಾಡಿ)

ನಿರೂಪಣೆ: ವೆಂಕಟೇಶ ಜಿ.ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.