ನವದೆಹಲಿ: ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದ ಮನೆಯೊಂದರಲ್ಲಿ ಗುರುವಾರ ಹಾಗೂ ಗಾಜಿಪುರ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಪತ್ತೆಯಾಗಿರುವ ಸುಧಾರಿತ ಸ್ಫೋಟಕಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟ ನಡೆಸುವ ಉದ್ದೇಶದಿಂದ ಸಂಗ್ರಹಿಸಲಾಗಿತ್ತು ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನ ಶುಕ್ರವಾರ ತಿಳಿಸಿದ್ದಾರೆ.
ಸ್ಥಳೀಯರ ಸಹಕಾರವಿಲ್ಲದೆ ಇಂತಹ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ಸೀಮಾಪುರಿಯಲ್ಲಿ ಪತ್ತೆಯಾಗಿರುವ ಐಇಡಿ ಎರಡೂವರೆಯಿಂದ ಮೂರು ಕೆ.ಜಿ. ಇದ್ದು, ಅದನ್ನು ನಿಷ್ಟ್ರಿಯಗೊಳಿಸಲಾಗಿದೆ. ಮನೆಯ ಮಾಲಿಕನನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಆಸ್ತಾನ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.
ಐಇಡಿ ಪತ್ತೆಯಾಗಿರುವ ಮನೆಯ ಸಮೀಪದ ಕಟ್ಟಡಗಳಿಂದ 400 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಈ ಪ್ರದೇಶದಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದೂ ವಿವರಿಸಿದ್ದಾರೆ.
ಐಇಡಿ ಪತ್ತೆಯಾಗಿರುವ ಮನೆಯಲ್ಲಿ ಎರಡು ತಿಂಗಳ ಹಿಂದೆ ಇಬ್ಬರು ಬಾಡಿಗೆಗೆ ವಾಸವಾಗಿದ್ದರು ಎಂದು ಮನೆಯ ಮಾಲೀಕ ಆಶೀಂ ಅವರ ಪತ್ನಿ ತಿಳಿಸಿದ್ದಾರೆ. ಆಶೀಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರ ತಾಯಿ ಆರೋಪಿಸಿದ್ದಾರೆ.
ಮನೆಯನ್ನು ಬಾಡಿಗೆಗೆ ನೀಡುವಾಗ ಆ ಇಬ್ಬರಿಂದ ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ಆಶೀಂ ತಿಳಿಸಿದ್ದು, ಇದುವರೆಗೆ ಆ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.