ಬೆಂಗಳೂರು: ‘ಪಕ್ಷಕ್ಕೆ ಬದ್ಧರಾಗಿರುವುದು ಇತ್ತೀಚಿನ ದಿನಗಳಲ್ಲಿ ಕಷ್ಟ. ಕಾನೂನಿನಡಿ ನಿಷೇಧಿಸಿದರೆ ಮಾತ್ರ ಪಕ್ಷಾಂತರ ನಿಲ್ಲಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಸ್ನೇಹಿತರೂ ಇಲ್ಲ. ಇತ್ತೀಚೆಗೆ ಹರಿಯಾಣ, ಮಹಾರಾಷ್ಟ್ರದಲ್ಲೂ ಇಂತಹ ಬೆಳವಣಿಗೆಗಳನ್ನು ನೋಡಿದ್ದೇವೆ. ಪಕ್ಷ ನಿಷ್ಠರು ಕೆಲವರಿದ್ದಾರೆ. ಪಕ್ಷಾಂತರಕ್ಕೆ ಕಾನೂನಿನಲ್ಲಿ ಅವಕಾಶವಿದೆ’ ಎಂದರು.
‘ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಜನಪರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ಪಕ್ಷಕ್ಕೆ (ಕಾಂಗ್ರೆಸ್) ಅವರು ಬಂದಿರುವುದು ಒಳ್ಳೆಯದು. ಆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಅನಿವಾರ್ಯವೇ’ ಎಂಬ ಪ್ರಶ್ನೆಗೆ, ‘ಆ ರೀತಿಯ ಪ್ರಶ್ನೆ ಬರುವುದಿಲ್ಲ. ನಾವು ಕ್ಷೇತ್ರವನ್ನು ಗೆಲ್ಲಬೇಕು. ಅದಕ್ಕೆ ರಣನೀತಿ ರೂಪಿಸಬೇಕು. ಯಾವ ರೀತಿ ರಣನೀತಿ ರೂಪಿಸಬೇಕೊ, ಅದನ್ನು ನಮ್ಮ ಅಧ್ಯಕ್ಷರು ಮಾಡಿದ್ದಾರೆ. ಅನಿವಾರ್ಯ ಎನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿಗೆ ಅವಶ್ಯಕ’ ಎಂದು ಸಮಜಾಯಿಷಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.