ಮಂಗಳೂರು: ‘ಬಜರಂಗ ದಳ, ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಪಕ್ಷ ಇರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯವೂ ಮುಗಿಯುತ್ತದೆ. ತಾಕತ್ತಿದ್ದರೆ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಸವಾಲು ಹಾಕಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ರಾಷ್ಟ್ರ ಭಕ್ತಿಯನ್ನು ಕಲಿಸಿದೆ. ದೇಶವನ್ನು ಮುನ್ನಡೆಸುವ ಪ್ರಧಾನಮಂತ್ರಿ ಆರ್‌ಎಸ್‌ಎಸ್ ಸ್ವಯಂ ಸೇವಕರು. ನಾವೆಲ್ಲರೂ ಆರ್‌ಎಸ್‌ಎಸ್ ಸ್ವಯಂ ಸೇವಕರು. ಹಿಂದೆ ನೆಹರೂ, ಇಂದಿರಾಗಾಂಧಿ ಎಲ್ಲರೂ ನಿಷೇಧಕ್ಕೆ ಪ್ರಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ. ಯಾವಾಗ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಆಗಿಲ್ಲ ಇಂತಹ ಪ್ರಯತ್ನಗಳು ನಡೆದಿವೆ. ರಾಜ್ಯವನ್ನು ವಿಭಜನೆ ವಾದದ ಮೂಲಕ ಕಟ್ಟುವುದು ಬೇಡ’ ಎಂದರು.
‘ಪ್ರಿಯಾಂಕ್ ಖರ್ಗೆ ನಾಲಿಗೆ ಹಿಡಿತದಲ್ಲಿಟ್ಟು ಮಾನತನಾಡಲಿ. ಬಜರಂಗ ದಳ, ಆರ್‌ಎಸ್‌ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. ನಾವು ಪಿಎಫ್‌ಐ ನಿಷೇಧಿಸಿದ್ದೇವೆ. ನೀವು ಮತ್ತೆ ಏನು ನಿಷೇಧ ಮಾಡುವುದಿದೆ’ ಎಂದು ಪ್ರಶ್ನಿಸಿದರು.
‘ಮಂತ್ರಿಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತದೆ. ಕಾಂಗ್ರೆಸ್ ಒಳಜಗಳ ಹೊರ ಬರದಂತೆ ಮಾಡಿರುವ ಷಡ್ಯಂತ್ರದ ಭಾಗವಾಗಿ ಆರ್‌ಎಸ್‌ಎಸ್ ಹೆಸರನ್ನು ಮುನ್ನೆಲೆಗೆ ತರಲಾಗಿದೆ ಎಂದು ಟೀಕಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳನ್ನು ನೀಡಿದೆ. ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಇವನ್ನು ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತಿಲ್ಲ. ಸುಳ್ಳು ಆಶ್ವಾಸನೆ ನೀಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಹಿಡಿದಿದೆ. ಕಾಂಗ್ರೆಸ್ ಆಶ್ವಾಸನೆ ನಂಬಿ ಮತ ಹಾಕಿರುವ ಮತದಾರರು ಆಕ್ರೋಶದಲ್ಲಿದ್ದಾರೆ ಎಂದು ಹೇಳಿದರು.
‘ಜನರು ವಿದ್ಯುತ್ ಬಿಲ್ ಪಾವತಿಸಬಾರದು ಅಂತ ನಾನೇ ಹೇಳ್ತೇನೆ. ಜನರ ಆಕ್ರೋಶ ಸಹಜ. ಒಂದೊಮ್ಮೆ ಜನರಿಗೆ ತೊಂದರೆಯಾದರೆ ನಾವು ಜನರ ಪರವಾಗಿ ನಿಲ್ಲುತ್ತೇವೆ. ವಿದ್ಯುತ್ ಬಿಲ್ ನೀಡಲು ಬರುವ ನೌಕರರ ಮೇಲೆ ಹಲ್ಲೆಯಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆ’ ಎಂದು ಎಚ್ಚರಿಸಿದರು.
‘ಯಾವುದೋ ಸಂದರ್ಭದಲ್ಲಿ ಹೇಳಿದ ಹೇಳಿಕೆ ಬಗ್ಗೆ ಈಗ ಎಫ್‌ಐಆರ್ ಹಾಕಲಾಗುತ್ತಿದೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ಅವಧಿಯ ₹20ಸಾವಿರ ಕೋಟಿ ಮೊತ್ತದ ಟೆಂಡರ್ ವಾಪಸ್ ಅನ್ನು ಈ ಸರ್ಕಾರ ವಾಪಸ್ ಪಡೆದಿದೆ. 80 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಡಲು ಈ ರೀತಿ ಮಾಡಲಾಗಿದೆ. ಹಿಂದಿನ ಸರ್ಕಾರದ ಮೇಲೆ ಬಂದಿರುವ 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆ ನಡೆಯಲಿ. ಜತೆಗೆ ಲೋಕಾಯುಕ್ತದಲ್ಲಿರುವ ಸಿದ್ದರಾಮಯ್ಯ ಮೇಲಿನ ಪ್ರಕರಣದ ತನಿಖೆಯೂ ನಡೆಯಲಿ’ ಎಂದು ನಳಿನ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.