ಬೆಂಗಳೂರು: ಘನತೆವೆತ್ತ ಕುಲಪತಿ ಹುದ್ದೆ ಅಲಂಕರಿಸಲು ಅಪಾರ ವಿದ್ವತ್ತು, ಆಡಳಿತ ನೈಪುಣ್ಯಗಳು ಅರ್ಹತೆಗಳಾಗಿದ್ದ ಕಾಲವೊಂದಿತ್ತು. ಈಗ ಅವು ಕೇವಲ ‘ಮಾನ’ ದಂಡಗಳಾಗಿದ್ದು, ಕುಲಪತಿ ಹುದ್ದೆಗಳು ಕೋಟಿ ಕೋಟಿ ರೂಪಾಯಿಗೆ ಬಿಕರಿಯಾಗುತ್ತಿವೆ.
ಪ‍್ರಕಾಂಡ ಪಾಂಡಿತ್ಯ ಹೊಂದಿದವರು ಕುಲಪತಿಗಳಾಗಿದ್ದರೆ ವಿಶ್ವವಿದ್ಯಾಲಯಕ್ಕೂ ಕಿರೀಟಪ್ರಾಯವಾಗಿರುತ್ತಿದ್ದರು. ಕುವೆಂಪು, ಡಿ.ಸಿ.ಪಾವಟೆ, ಹಾ.ಮಾ ನಾಯಕ, ಯು.ಆರ್.ಅನಂತಮೂರ್ತಿ, ಶಾಂತಿನಾಥ ದೇಸಾಯಿ ಅಂಥವರು ಈ ಹುದ್ದೆ ನಿರ್ವಹಿಸಿದ್ದ ವಿದ್ವತ್ಪೂರ್ಣ ಕುಲಪತಿಗಳಲ್ಲಿ ಕೆಲವರು.
ಒಂದು ದಶಕದಿಂದೀಚೆಗೆ ಕುಲಪತಿ ಹುದ್ದೆಯೆಂಬುದು ಹರಾಜು ಕೂಗಿ ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ಕುಲಪತಿ ನೇಮಕದ ಅಧಿಕಾರ ಹೊಂದಿದ ರಾಜಭವನದೊಳಗೆ ಗಟ್ಟಿ ಕುಳಿತ ಗೌರವಾನ್ವಿತ ರಾಜ್ಯಪಾಲರು, ಆಯಾ ಕಾಲಕ್ಕೆ ಉನ್ನತ ಶಿಕ್ಷಣ ಸಚಿವರಾಗಿದ್ದವರು, ಆಳಿದ ಸರ್ಕಾರಗಳು ಈ ತಪ್ಪುಹಾದಿಯ ಭಾಗಿದಾರರು.
ಜಿಲ್ಲೆಗೊಂದು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರತೊಡಗಿದ ಮೇಲೆ ಹೊಸ ಕಟ್ಟಡಗಳ ನಿರ್ಮಾಣ, ಕುರ್ಚಿ ಮೇಜು, ಬೆಂಚುಗಳ ಖರೀದಿ ಭರಾಟೆ ಹೆಚ್ಚಾಗತೊಡಗಿದ ಮೇಲೆ ವಿದ್ವಜ್ಜನರ ಬದಲು ‘ಗುತ್ತಿಗೆದಾರ’ರು ಕುಲಪತಿ ಪಟ್ಟಕ್ಕೆ ಏರತೊಡಗಿದರು.
ಗುತ್ತಿಗೆಯ ಸಾಮರ್ಥ್ಯವೇ ಕುಲಪತಿಯ ಆಯ್ಕೆಯ ಮಾನದಂಡವಾಗತೊಡಗಿತು. ಕುಲಪತಿ ಹುದ್ದೆಗೆ ಅಧ್ಯಯನ ಶೀಲ, ಜ್ಞಾನಚಕ್ಷುಗಳನ್ನು ಹುಡುಕಿಕೊಂಡು ಹೋಗುವ ಪದ್ಧತಿ ಬದಲಾಗಿ, ಅಧಿಕಾರದ ಕೇಂದ್ರದ ಕಡೆಗೆ ಆಕಾಂಕ್ಷಿಗಳು ದಾಂಗುಡಿ ಇಡತೊಡಗಿದರು. ವಿಧಾನಸೌಧ, ಮುಖ್ಯಮಂತ್ರಿ ಗೃಹ ಕಚೇರಿ, ಸರ್ಕಾರಿ ನಿವಾಸದ ಕಂಬಗಳನ್ನು ಸುತ್ತುವವರಿಗೆ ಲಾಭಕಟ್ಟಿನ ಪೀಠ ದಕ್ಕತೊಡಗಿತು. ವಿಧಾನಸೌಧಕ್ಕೆ ಸೀಮಿತವಾಗಿ ಜಾತಿ ಮತ್ತು ಹಣದ ಥೈಲಿ ಜ್ಞಾನ ದೇಗುಲವನ್ನು ಆಕ್ರಮಿಸಿಕೊಂಡು ಅಲ್ಲಿನ ವಿದ್ಯಮಾನವನ್ನು ಕಾಮಗಾರಿಗಳ ತಾಣವಾಗಿಸಿತು.
* ಇದನ್ನೂ ಓದಿ:ವಿಶ್ವವಿದ್ಯಾಲಯಗಳ ಕರ್ಮಕಾಂಡ: ಮೇಯೋಕೆ ಹಸನಾದ ಹುಲ್ಲುಗಾವಲು
ಹೊಸ ಶೋಧ, ಅಧ್ಯಯನಗಳ ವಾಙ್ಮಯಕ್ಕೆ ವೇದಿಕೆಯಾಗಿದ್ದ ಮೈಸೂರು ವಿಶ್ವವಿದ್ಯಾಲಯದ ‘ಪ್ರಬುದ್ಧ ಕರ್ನಾಟಕ’, ಬೆಂಗಳೂರು ವಿಶ್ವವಿದ್ಯಾಲಯದ ‘ಸಾಧನೆ’ಯಂತಹ ಮಾಸಿಕ ಪತ್ರಿಕೆಗಳು ಕಣ್ಮರೆಯಾದವು. ಈ ಜಾಗದಲ್ಲಿ ಕಾಮಗಾರಿಗಳ ಜಾಹೀರಾತು, ಬುಲೆಟಿನ್‌ಗಳು ಹೆಚ್ಚತೊಡಗಿದ್ದು ವಿಶ್ವವಿದ್ಯಾಲಯಗಳಲ್ಲಿ ಬದಲಾದ ‘ಆಶಯ’ಗಳಿಗೆ ಸಾಕ್ಷಿಯಾದವು.
ದರ ನಿಗದಿಯ ಪರಿಪಾಠ
ಕುಲಪತಿಗಳ ನೇಮಕಾತಿಗಾಗಿ ಅಧ್ಯಕ್ಷ, ಮೂವರು ಸದಸ್ಯರಿರುವ ಶೋಧನಾ ಸಮಿತಿ ರಚಿಸುವ ಪರಿಪಾಠ ಇದೆ. ಸಮಿತಿಯು ಶಿಫಾರಸು ಮಾಡಿದ ಹೆಸರಲ್ಲಿ ಮೂವರ ಹೆಸರನ್ನು ಆಯ್ದು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಅದರಲ್ಲಿ ಒಬ್ಬರ ಹೆಸರನ್ನು ನೇಮಕಾತಿ ಮಾಡುವುದು ರಾಜ್ಯಪಾಲರ ಅಧಿಕಾರ.
‘ರಾಮೇಶ್ವರ ಠಾಕೂರ್, ಹಂಸರಾಜ್ ಭಾರದ್ವಾಜ್ ಅಂತಹ ‘ಧನಮಾನ್ಯ’ರು ರಾಜ್ಯಪಾಲರಾಗಿ ಬಂದಮೇಲೆ ಶೋಧನಾ ಸಮಿತಿ ನೆಪಕ್ಕಷ್ಟೇ ಸೀಮಿತವಾಯಿತು. ಶಾಸಕರ ಭವನದ ಕಡೆಯಿಂದ ರಾಜಭವನ ಪ್ರವೇಶಿಸುವ ಹಿಂಬಾಗಿಲಿನಿಂದ ನಡೆಯುವ ‘ವ್ಯವಹಾರ’ ಪ್ರಧಾನವಾಯಿತು. ಸರ್ಕಾರ ಕಳುಹಿಸಿದ್ದ ಹೆಸರುಗಳನ್ನು ಬಿಟ್ಟು, ಬೇರೆ ಹೆಸರು ಕಳುಹಿಸಿ, ಇಂತಹದೇ ಹೆಸರು ಕಳುಹಿಸಿ ಎಂದು ರಾಜ್ಯಪಾಲರು ಕಡತ ಹಿಂತಿರುಗಿಸುವಷ್ಟರ ಮಟ್ಟಿಗೆ ಇದು ವಿಪರೀತಕ್ಕೆ ಹೋಯಿತು’ ಎಂದು ಮಾಜಿ ಶಿಕ್ಷಣ ಸಚಿವರೊಬ್ಬರು ಹೇಳುತ್ತಾರೆ.
ಹೊಸ ವಿಶ್ವವಿದ್ಯಾಲಯಗಳಾದರೆ ₹2 ಕೋಟಿಯಿಂದ ₹4 ಕೋಟಿವರೆಗೂ ಕುಲಪತಿ ಹುದ್ದೆಯ ‘ಹರಾಜಿ’ನ ದರ ನಿಗದಿಯಾಯಿತು. ಯಶಸ್ವಿ ‘ಅಡ್ಡದಾರಿ ವೀರ’ರು ಕುಲಪತಿ ನೇಮಕಾತಿಯ ದಲ್ಲಾಳಿಯಾಗಿ ‘ಕರ್ತವ್ಯ’ ನಿರ್ವಹಿಸಿದ್ದೂ ಆಯಿತು. ಶೋಧನಾ ಸಮಿತಿಯ ರಚನೆಯಲ್ಲಿ ಕೂಡ ಆಕಾಂಕ್ಷಿ ಅಭ್ಯರ್ಥಿಗಳು ಹಸ್ತಕ್ಷೇಪ ಮಾಡತೊಡಗಿದರು. ಹೀಗೆ ಮಾಡಿ ಕೆಲವರು ಆಯಕಟ್ಟಿನ ಹುದ್ದೆಯನ್ನು ಗಿಟ್ಟಿಸಿಕೊಂಡೂ ಬಿಟ್ಟರು.
ಇತ್ತೀಚೆಗೆ ಕೆಲವೇ ಕೆಲವು ಕುಲಪತಿಗಳು ವಿದ್ವತ್ತಿನ ಆಧಾರದಲ್ಲಿ ನೇಮಕಗೊಂಡಿದ್ದಾರೆ. ಉಳಿದವರು ಜಾತಿಯ ಜೋಳಿಗೆ ಹಿಡಿದುಕೊಂಡು ಪಟ್ಟವೇರಿದ್ದಾರೆ. ಹೀಗೆ ಜಾತಿಯ ಪಾಳಿಯಲ್ಲಿ ನೇಮಕವಾಗಬೇಕಾದರೂ ಕೋಟಿ ಪಾವತಿ ಕಡ್ಡಾಯ ಎಂಬುದು ಹೊಸ ವಿದ್ಯಮಾನ.
ಕುಲಪತಿ ಹುದ್ದೆಗೆ ಮಾತ್ರ ಕೋಟಿ ವ್ಯವಹಾರ ನಡೆಯುತ್ತಿಲ್ಲ. ವಿಶ್ವವಿದ್ಯಾಲಯದ ಆಡಳಿತವನ್ನು ‘ಸುಗಮ’ ವಾಗಿ ನಡೆಸುವ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಕೂಡ ದರ ನಿಗದಿಯಾಗಿದೆ. ಸಾಮಾನ್ಯ ವಿಶ್ವವಿದ್ಯಾಲಯಗಳಲ್ಲಿ ₹3 ಲಕ್ಷಕ್ಕೆ ಇದ್ದರೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹರಾಜಿನ ಮೊತ್ತ ₹35 ಲಕ್ಷ ಗಡಿ ದಾಟಿದ್ದಿದೆ. ಇದಕ್ಕೆ ಮದ್ದು ಅರೆಯುವ ಕಾಯಕ ಎಲ್ಲಿಂದ ಶುರುವಾಗಬೇಕು, ಯಾರಿಂದ ಶುರುವಾಗಬೇಕು ಎಂಬುದು ಚಿದಂಬರ ರಹಸ್ಯ.
ಒಳನೋಟ
ಸದಾ ಹೊಸತನಕ್ಕೆ ತುಡಿಯುವ ನಿಮ್ಮ ನೆಚ್ಚಿನ ‘ಪ್ರಜಾವಾಣಿ’ ಸುದ್ದಿಯಾಚೆಗಿನ ಸತ್ಯಗಳ ಕುರಿತು ಬೆಳಕು ಚೆಲ್ಲುವತ್ತ ಹೆಜ್ಜೆ ಇಟ್ಟಿದೆ. ‘ಒಳನೋಟ’ ಇನ್ನು ಮುಂದೆ ಪ್ರತಿ ಭಾನುವಾರ ವಿರಾಮದ ಓದಿಗೆ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.