ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ತಪ್ಪಿಲ್ಲ ಎನ್ನುವುದು ಸಾಬೀತಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜತೆ ಇಂದು (ಬುಧವಾರ) ಮಾತನಾಡಿದ ಅವರು, ‘ಹಿಂದೆಯೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಮೇಲೆ ಆರೋಪ ಬಂದಿತ್ತು. ಅವರು ನಿರಾಪರಾಧಿ ಎನ್ನುವುದು ದೃಢಪಟ್ಟ ನಂತರ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ವಾಲ್ಮೀಕಿ ನಿಗಮ ಹಗರಣದ ತನಿಖೆ ಮುಗಿದು, ಕೋರ್ಟ್ ತೀರ್ಪು ಬಂದ ನಂತರ ಅವರನ್ನೂ ಮರಳಿ ಸಂಪುಟಕ್ಕೆ ತೆಗೆದುಕೊಳ್ಳಲು ಅಭ್ಯಂತರವಿಲ್ಲ‘ ಎಂದರು.
‘ಸಂಪುಟ ಪುನರ್‌ರಚನೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಡಿಸೆಂಬರ್ ನಂತರ ಎನ್ನುವ ಚರ್ಚೆ ಇದೆ. ಇಂತಹ ವಿಚಾರಗಳಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.
ಮುಸ್ಲಿಮರ ಮನವಿಯ ಪರಿಶೀಲನೆ ಅಷ್ಟೆ...
‘ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಯಾವುದೇ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಿಲ್ಲ. ಮುಸ್ಲಿಂ ಸಮುದಾಯದ ಕೆಲ ಶಾಸಕರು ಹಾಗೂ ಮುಖಂಡರು ಕಾಮಗಾರಿಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಮನವಿ ಪರಿಶೀಲಿಸಲು ಮುಖ್ಯಮಂತ್ರಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ. ಇಲಾಖೆ ಪರಿಶೀಲಿಸಿದ ಬಳಿಕ ಸಂಪುಟದ ಮುಂದೆ ಪ್ರಸ್ತಾವ ತರಬೇಕು. ಅಲ್ಲಿ ತೀರ್ಮಾನವಾದ ಬಳಿಕ ಸರ್ಕಾರಿ ಆದೇಶ ಆಗಬೇಕಾಗುತ್ತದೆ. ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯೇ ನಡೆದಿಲ್ಲ‘ ಎಂದರು.
‘ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎನ್ನುವ ಆರೋಪ ಸರಿಯಲ್ಲ, ಪರಿಶಿಷ್ಟರಿಗೆ ನೀಡಿದಂತೆ ತಮಗೂ ಸೌಲಭ್ಯ ಕಲ್ಪಿಸಬೇಕು ಎಂಬ ಮುಸ್ಲಿಂ ಮುಖಂಡರ ವಿನಂತಿಯನ್ನೇ ಆದೇಶ ಎಂಬಂತೆ ಬಿಂಬಿಸುವುದು ಸರಿಯಲ್ಲ. ಯಾವುದೇ ಸಮುದಾಯ, ಧರ್ಮದ ಬಡವರ ಅಭಿವೃದ್ಧಿಗೆ ಒತ್ತು ನೀಡುವುದು ಸರ್ಕಾರದ ಕರ್ತವ್ಯ‘ ಎಂದರು.
ವಿಧಾನಸಭೆ ಉಪ ಚುನಾವಣೆ ಮುಗಿದ ಬಳಿಕ ಒಳಮೀಸಲಾತಿಗೆ ಆಯೋಗ ರಚಿಸಲಾಗುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಒಳ ಮೀಸಲಾತಿಗಾಗಿ ಇಷ್ಟು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸರಿಯಾಗಿ ಮಾಡಲು ಇನ್ನು ಮೂರು ತಿಂಗಳು ಕಾಯುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.
‘ಕೋವಿಡ್ ಹಗರಣದ ವರದಿಯನ್ನು ಉಪ ಸಮಿತಿ ಸಂಪೂರ್ಣವಾಗಿ ಪರಿಶೀಲಿಸಿ, ತೀರ್ಮಾನಕ್ಕೆ ಬರುತ್ತೇವೆ. ಭ್ರಷ್ಟಾಚಾರಕ್ಕೆ ಸೂಕ್ತ ಪುರಾವೆಗಳಿದ್ದರೆ ಸಚಿವ ಸಂಪುಟದ ಮುಂದೆ ಇಟ್ಟು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಪರಮೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.