ADVERTISEMENT

ಹಬ್ಬಕ್ಕೆ ಬಸ್‌ ದರ ಏರಿಸಿದರೆ ಪರ್ಮಿಟ್‌ ರದ್ದು: ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:54 IST
Last Updated 25 ಅಕ್ಟೋಬರ್ 2024, 15:54 IST
<div class="paragraphs"><p>ಖಾಸಗಿ ಬಸ್‌ಗಳ ಟಿಕೆಟ್‌ ದರ ಪರಿಶೀಲಿಸುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು</p></div>

ಖಾಸಗಿ ಬಸ್‌ಗಳ ಟಿಕೆಟ್‌ ದರ ಪರಿಶೀಲಿಸುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು

   

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಟಿಕೆಟ್‌ ದರಗಳನ್ನು ಎರಡು–ಮೂರು ಪಟ್ಟು ಹೆಚ್ಚಳ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥ ಬಸ್‌ಗಳ ಪರವಾನಗಿ (ಪರ್ಮಿಟ್‌) ಮತ್ತು ನೋಂದಣಿ ಪತ್ರವನ್ನು (ಆರ್‌ಸಿ) ಅಮಾನತು ಮಾಡಲಾಗುವುದು. ಟಿಕೆಟ್‌ ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ.

ಈ ಬಗ್ಗೆ ಶುಕ್ರವಾರ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಸಾಮಾನ್ಯ ದರಕ್ಕಿಂತ ಅಧಿಕ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಟಿಕೆಟ್‌ ದರ ಹೆಚ್ಚಳ ಮಾಡದಂತೆ ಖಾಸಗಿ ಬಸ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಯಾಣಿಕರು ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ಕಿಂಗ್‌ ಮಾಡುವಾಗ ಅನಧಿಕೃತ ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಖಾಸಗಿ ಬಸ್‌ನವರು ಹೆಚ್ಚಿನ ದರ ಸಂಗ್ರಹಿಸುವುದು ಕಂಡು ಬಂದರೆ ಸಾರಿಗೆ ಇಲಾಖೆಯ ನಿಯಂತ್ರಣ ಕೊಠಡಿಗೆ (9449863429, 9449863426) ಅಥವಾ ಸ್ಥಳೀಯ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.

ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಫೋಟಕ ಸಾಮಗ್ರಿ, ಇತರ ಸರಕುಗಳನ್ನು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂಥ ಪ್ರಕರಣಗಳು ಕಂಡು ಬಂದರೆ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಬಸ್‌ಗಳ ಟಿಕೆಟ್‌ ದರ ಪರಿಶೀಲಿಸುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು

‘ಬರೀ ನಾಟಕ’

‘ರಾಜ್ಯದ ಕಾಂಟ್ರ್ಯಾಕ್ಟ್‌ ಕ್ಯಾರೇಜ್‌ ಬಸ್‌ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡಿದರೆ ಮಾತ್ರ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಹೆಚ್ಚಿನ ಬಸ್‌ಗಳು ಆಲ್‌ ಇಂಡಿಯಾ ಟೂರಿಸ್ಟ್‌ ಪರ್ಮಿಟ್‌ ವಾಹನಗಳಾಗಿವೆ. ಅವೆಲ್ಲ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ. ಆ ವಾಹನಗಳು ದರ ಏರಿಸಿದರೆ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಕ್ಕೆ ಇಲ್ಲ. ಹಬ್ಬಗಳು ಬಂದಾಗ ತಪಾಸಣೆಯ ನಾಟಕ ಮಾಡಲಾಗುತ್ತದೆ. ಬಸ್‌ ದರ ಹೆಚ್ಚಳ ಹಾಗೇ ಮುಂದುವರಿದಿರುತ್ತದೆ’ ಎಂದು ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಬ್ಬ ಮುಗಿಯುವವರೆಗೆ ಪ್ರತಿ ಆರ್‌ಟಿಒ ವ್ಯಾಪ್ತಿಯಲ್ಲಿ ತಪಾಸಣೆಗಳು ನಡೆಯುತ್ತವೆ. ಅಧಿಕ ದರ ವಿಧಿಸಿದ ಬಸ್‌ಗಳನ್ನು ಪತ್ತೆಹಚ್ಚಲಾಗುತ್ತದೆ. ಆದರೆ ಯಾವುದೇ ಪರ್ಮಿಟ್‌ ಅಥವಾ ಆರ್‌ಸಿ ಅಮಾನತು ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.