ADVERTISEMENT

ನಿವೇಶನ ಹಂಚಿಕೆ ತಪ್ಪು ಎನ್ನುವುದಾದರೆ ₹ 62 ಕೋಟಿ ಪರಿಹಾರ ಕೊಡಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:24 IST
Last Updated 4 ಜುಲೈ 2024, 15:24 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಇದು ವಿಷಯವೇ ಇಲ್ಲ. ಆರ್‌ಎಸ್‌ಎಸ್‌ ಹೇಳಿದಂತೆ ಬಿಜೆಪಿಯವರು ಮಾಡುತ್ತಾರೆ’ ಎಂದರು.

ADVERTISEMENT

‘ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ಹಾಗಿದ್ದಲ್ಲಿ, ಜಮೀನಿನ ಮೌಲ್ಯ ₹62 ಕೋಟಿ ಕೊಟ್ಟುಬಿಡಲಿ. ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿರಲಿಲ್ಲ’ ಎಂದರು.

ಬಿಜೆಪಿ ಅಧಿಕಾರದಲ್ಲಿತ್ತು: ‘ನಿವೇಶನ ಹಂಚಿಕೆಯಾದಾಗ (2021ರಲ್ಲಿ) ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿಯವರೇ ನಿವೇಶನಗಳನ್ನು ಹಂಚಿ, ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಕೊಡಿ ಎಂದು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ. ಬಿಜೆಪಿಯವರದ್ದು ರಾಜಕೀಯ ಪ್ರೇರಿತ ಆಪಾದನೆ’ ಎಂದರು.

‘ಭೂ ಸ್ವಾಧೀನ ಆದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು 2023ರ ಅಕ್ಟೋಬರ್‌ನಲ್ಲಿ  ಸಚಿವರು ಬರೆದಿದ್ದಾರೆ. ಬರೆಯದೇ ಹೋದರೂ ₹62 ಕೋಟಿಯನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38,264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ’ ಎಂದರು.

‘ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತವನ್ನು ನಗರಾಭಿವೃದ್ಧಿ ಸಚಿವರು ತೆಗೆದುಕೊಂಡು ಬಂದಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಕಡತ ತಂದಿಲ್ಲ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.