ಬೆಂಗಳೂರು: ‘ಬಿಜೆಪಿಯವರು ವಕ್ಫ್ ಆಸ್ತಿ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಮಾಡಿಕೊಳ್ಳುತ್ತಿದ್ದಾರೆ. ಕೋಮುಗಲಭೆ, ಶಾಂತಿ ಕದಡಲು ಅವರು ಏನು ಬೇಕಾದರೂ ಮಾಡಬಹುದು. ಉದ್ದೇಶಪೂರ್ವಕವಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಿದರೆ ಸುಮ್ಮನೆ ಇರುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಎಚ್ಚರಿಕೆ ನೀಡಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನು ಊಹೆ ಮಾಡಲು ಆಗುವುದಿಲ್ಲ’ ಎಂದೂ ಹೇಳಿದರು.
ಶೇ 40 ಆರೋಪ ಮಾಡಿ ಅಧಿಕಾರಕ್ಕೆ ಬಂದಿಲ್ಲ: ‘ಶೇ 40 ಲಂಚ ಆರೋಪ ಸುಳ್ಳು’ ಎಂಬ ವರದಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ನಾವು ಅಧಿಕಾರಕ್ಕೆ ಬಂದಿದ್ದೇ ಶೇ 40 ಲಂಚ ಆರೋಪ ಮಾಡಿದ ಕಾರಣದಿಂದ ಎಂದು ಯಾರು ಹೇಳಿದ್ದು’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರ ವಿರುದ್ಧ ಕೆಂಪಣ್ಣ ಅವರು ಪ್ರಧಾನಿಗೆ ದೂರು ಕೊಟ್ಟಿದ್ದರು. ಅದೇ ಕಾರಣಕ್ಕೆ ಜನರ ಹಿತ ಕಾಪಾಡುವ ದೃಷ್ಟಿಯಿಂದ ನಾವು ಹೋರಾಟ ಮಾಡಿದ್ದೆವು. ಕೇವಲ ಶೇ 40 ಲಂಚ ಆರೋಪ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ ಎನ್ನುವುದು ಸುಳ್ಳು’ ಎಂದು ಸಮರ್ಥಿಸಿಕೊಂಡರು.
ಕೆಟ್ಟ ಅಭಿರುಚಿಯ ಪದ: ‘ಕರಿಯ’ ಪದ ಬಳಕೆ ಸರಿಯಲ್ಲ. ಇದು ಅವರವರ ಸಂಸ್ಕೃತಿ ಆಧಾರದಲ್ಲಿ ಮಾತನಾಡಿರಬಹುದು. ಆದರೆ, ಇದು ಅಸಂಸದೀಯ ಹಾಗೂ ಕೆಟ್ಟ ಅಭಿರುಚಿಯ ಪದ ಬಳಕೆ. ಈ ಬಗ್ಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿ ಸ್ಪಷ್ಟೀಕರಣ ಕೇಳಲಿದೆ’ ಎಂದು ಪರಮೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.