ADVERTISEMENT

‍ಜಾತಿಗಣತಿ ಜಾರಿ ಮಾಡದಿದ್ದರೆ ನಾವು ಪ್ರಣಾಳಿಕೆಗೆ ವಿರುದ್ಧ ಎಂದರ್ಥ: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ನವದೆಹಲಿ: ‘ಕರ್ನಾಟಕದಲ್ಲಿ ಜನಗಣತಿ ಅಥವಾ ಜಾತಿ ಗಣತಿ ವರದಿ ಜಾರಿ ಮಾಡುವುದಿಲ್ಲ ಎಂಬ ನಿಲುವು ತಾಳಿದರೆ ನಾವು ನಮ್ಮ ಪ್ರಣಾಳಿಕೆಗೆ ವಿರುದ್ಧವಾಗಿದ್ದೇವೆ ಎಂದರ್ಥ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು. 

ಬುಧವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ರಾಜ್ಯದ ಜನಸಂಖ್ಯೆ ಆಧಾರಿತ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅರಿಯಲು ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆ ಮಾಡಿಸಿದೆ. ಇದು ಜಾತಿ ಸಮೀಕ್ಷೆ ಅಲ್ಲ. ಈ ವಿಷಯದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತನಾಡುವ ಮೊದಲು ನಮ್ಮ ಪ್ರಣಾಳಿಕೆಯನ್ನೊಮ್ಮೆ ನೋಡಬೇಕು. ನಾವು ಜನಗಣತಿ ಮಾಡುತ್ತೇವೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಇದಕ್ಕೆ ಯಾರಿಂದಲೂ ಆಕ್ಷೇಪಣೆ ಬೇಕಾಗಿಲ್ಲ’ ಎಂದರು. 

‘ನಮ್ಮ ಸಚಿವ ಸಂಪುಟದಲ್ಲಿ ಪ್ರಭಾವಿ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆ ಬಳಿಕ ಈ ವಿಷಯದ ಬಗ್ಗೆ ಚರ್ಚೆ ಆಗಲಿ. ವರದಿಯನ್ನು ಓದುವ ಮೊದಲೇ ಅವೈಜ್ಞಾನಿಕ ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು. 

ADVERTISEMENT

‘ಇದು ಹಿಂದುಳಿದ ವರ್ಗಗಳಿಗೆ ಅವಕಾಶ ತಪ್ಪಿಸಲು ಸಿದ್ಧ ಮಾಡಿರುವ ಸ್ಲೋಗನ್‌. ಇದನ್ನು ನಾವು ಯಾರೂ ಒಪ್ಪುವುದಿಲ್ಲ. ಸಂವಿಧಾನದಲ್ಲಿ ಇರುವಂತೆ ಎಲ್ಲರಿಗೂ ಸಮಬಾಳು ಸಮಪಾಲು ಸಿಗಬೇಕು’ ಎಂದು ಅವರು ಹೇಳಿದರು. 

‘ಮುಡಾ ಪ್ರಕರಣದಲ್ಲಿ ಲೋಕಾಯುಕ್ತದವರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಎಲ್ಲಿಯೂ ಮುಚ್ಚಿ ಹೋಗಿಲ್ಲ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಲಿ’ ಎಂದು ಅವರು ಮಾರ್ಮಿಕವಾಗಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.