ADVERTISEMENT

ಐಐಎಂಬಿ ಅಧ್ಯಾಪಕರ ಪತ್ರಕ್ಕೆ ಆಕ್ಷೇಪ

ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಖಂಡನಾ ಪತ್ರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 19:54 IST
Last Updated 26 ಆಗಸ್ಟ್ 2023, 19:54 IST
   

ಬೆಂಗಳೂರು: ‘ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು’ ಎಂದು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಹಾಲಿ ಹಾಗೂ ನಿವೃತ್ತ ಪ್ರಾಧ್ಯಾಪಕರು ಭಾರತದ ಕಾರ್ಪೋರೇಟ್‌ ಕಂಪನಿಗಳಿಗೆ ಬರೆದಿದ್ದ ಪತ್ರಕ್ಕೆ ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲವರ ಈ ನಡೆ ದಿವಾಳಿ ಮನಸ್ಥಿತಿ, ಸೈದ್ಧಾಂತಿಕ ಪಕ್ಷಪಾತದ ಪ್ರತಿಬಿಂಬ. ಇಂತಹ ನಡೆಯನ್ನು ಸಂಸ್ಥೆ ಖಂಡಿಸಬೇಕು ಎಂದು ಕೆ.ಶ್ರೀಧರ್ ರಾವ್‌,  ಎಸ್.ಎಲ್.ಗಂಗಾಧರಪ್ಪ,  ಎಂ.ಮದನ್‌ ಗೋಪಾಲ್‌,  ಪಿ.ಬಿ.ರಾಮಮೂರ್ತಿ,  ಎಂ.ಲಕ್ಷ್ಮೀನಾರಾಯಣ,  ರಮೇಶ್‌ ಝಳಕಿ,  ಎನ್.ಪ್ರಭಾಕರ್‌,  ಎಂ.ಎನ್.ಕೃಷ್ಣಮೂರ್ತಿ, ಗೋಪಾಲ್ ಹೊಸೂರ್‌, ಭಾಸ್ಕರ ರಾವ್‌,  ಬ್ರಿಜ್ ಕಿಶೋರ್‌ ಸಿಂಗ್‌ ಸೇರಿದಂತೆ 23 ನಿವೃತ್ತ ಅಧಿಕಾರಿಗಳು ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ. 

ಬೆಂಗಳೂರಿನಲ್ಲಿ  1973ರಲ್ಲಿ ಸ್ಥಾಪನೆಯಾದ ಐಐಎಂ ಬದ್ಧತೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ದೇಶದಲ್ಲೇ ಹೆಸರಾಗಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಜಾಗತಿಕ ಶ್ರೇಷ್ಠತೆಯ ಗುಣಮಟ್ಟವನ್ನು ಸಾಧಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಐಐಎಂಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಯ ಸ್ಥಾನಮಾನ ನೀಡಿದೆ. ಬೆಂಗಳೂರಿನ ಐಐಎಂ ಸಹ ಉಪನಿಷತ್ತಿನಿಂದ ಅಳವಡಿಸಿಕೊಂಡ ‘ನಮ್ಮ ಅಧ್ಯಯನವು ಪ್ರಬುದ್ಧವಾಗಲಿ’ ಎಂಬ ತನ್ನ ಧ್ಯೇಯವಾಕ್ಯದಂತೆ ನಡೆಯುತ್ತಿದೆ. ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಹಾಗೂ ಹಾಲಿ ಪ್ರಾಧ್ಯಾಪಕರು ಕಾರ್ಪೋರೇಟ್‌ ಕಂಪನಿಗಳಿಗೆ ಬರೆದ ಪತ್ರ ನಾಗರಿಕ ಸಮಾಜವನ್ನು ದಿಗ್ಭ್ರಮೆಗೊಳಿಸುವಂತಿದೆ ಎಂದಿದ್ದಾರೆ.

ADVERTISEMENT

ಪತ್ರದಲ್ಲಿ ಬಳಸಿರುವ ದ್ವೇಷದ ಭಾಷಣ, ಹಿಂಸಾತ್ಮಕ ಸಂಘರ್ಷ, ಅಲ್ಪಸಂಖ್ಯಾತರ ಮೇಲಿನ ದ್ವೇಷ ಮೊದಲಾದ ‍ಪದಗಳು ಅವರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಅವರ ದೃಷ್ಟಿಕೋನವನ್ನು ವಿರೋಧಿಸುವ ಮತ್ತೊಂದು ಗುಂಪಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮರುಹೇಳಿಕೆ ನೀಡಿದರೆ ಸಂಸ್ಥೆಯ ಆವರಣದಲ್ಲಿನ ಅತ್ಯುತ್ತಮ ಶೈಕ್ಷಣಿಕ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವ ಸೂಕ್ಷ್ಮತೆ ಅವರಿಗಿಲ್ಲವಾಗಿದೆ ಎಂದು ಟೀಕಿಸಿದ್ದಾರೆ.

ಇಂತಹ ಪತ್ರಗಳಿಗೆ ಮೌನವೇ ಉತ್ತರವಾದರೂ, ಭವಿಷ್ಯದಲ್ಲಿ ಇದೇ ರೀತಿಯ ಚಟುವಟಿಕೆಗಳು ಮುಂದುವರಿಯಬಹುದು. ಇದು ಐಐಎಂನ ವಿಶ್ವಾಸಾರ್ಹತೆ, ಖ್ಯಾತಿಯನ್ನು
ಹಾನಿಗೊಳಿಸುತ್ತದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.