ADVERTISEMENT

ಐಐಎಂಬಿ ಪ್ರಾಧ್ಯಾಪಕರ ಪತ್ರಕ್ಕೆ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 16:04 IST
Last Updated 5 ಸೆಪ್ಟೆಂಬರ್ 2023, 16:04 IST
   

ಬೆಂಗಳೂರು: ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು ಎಂದು ಐಐಎಂಬಿಯ ಕೆಲ ಹಾಲಿ ಮತ್ತು ನಿವೃತ್ತ ಪ್ರಾಧ್ಯಾಪಕರು ಕಾರ್ಪೊರೇಟ್‌ ಕಂಪನಿಗಳಿಗೆ ಇತ್ತೀಚೆಗೆ ಬರೆದಿರುವ ಪತ್ರವನ್ನು ಕೆಲ ಲೇಖಕರು, ಪತ್ರಕರ್ತರು ಮತ್ತು ನಿವೃತ್ತ ಅಧಿಕಾರಿಗಳು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಕ್ಯಾಪ್ಟನ್‌ ಗೋಪಿನಾಥ್‌, ಪತ್ರಕರ್ತ ಕೃಷ್ಣಪ್ರಸಾದ್‌, ಉದ್ಯಮಿಗಳಾದ ಬಿ.ಎಸ್‌.ಅಜಯ್‌ಕುಮಾರ್, ಬಿ.ಜಿ.ಕೋಶಿ, ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಟಿ.ರಮೇಶ್‌, ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸಮೂರ್ತಿ ಮತ್ತು ಇತರರು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಮುಕ್ತ ರಾಷ್ಟ್ರವೊಂದರಲ್ಲಿ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಕಾರ್ಪೊರೇಟ್‌ ವ್ಯಕ್ತಿಯವರೆಗೆ ಪ್ರತಿಯೊಬ್ಬನಿಗೂ ಯಾವುದೇ ಮಾಹಿತಿಯನ್ನು ಅದರ ವಿಶ್ವಾಸಾರ್ಹತೆಗೆ ಅನುಗುಣವಾಗಿ ಸ್ವತಂತ್ರವಾಗಿ ವಿಶ್ಲೇಷಿಸುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಯಾವುದೇ ಒಂದು ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತವಾದಾಗ ಅದನ್ನು ವಿರೋಧಿಸಿಯೂ ಅಭಿಪ್ರಾಯ ವ್ಯಕ್ತಪಡಿಸಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಆದರೆ ಈ ಪತ್ರದ ಬಗ್ಗೆ ಇತ್ತೀಚೆಗೆ ಕೆಲವು ನಿವೃತ್ತ ಐಎಎಸ್‌, ಐಪಿಎಸ್ ಅಧಿಕಾರಿಗಳು ಮತ್ತು ಐಐಎಂನ ಮಾಜಿ ಪ್ರಾಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದವರ ವಿರುದ್ಧವೇ ಕ್ರಮ ತೆಗೆದುಕೊಳ್ಳಬೇಕು ಎಂದು ಐಐಎಂ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ. ಈ ರೀತಿ ಒತ್ತಾಯಿಸುವುದರ ಬದಲಿಗೆ ಚರ್ಚೆ ನಡೆಸಬಹುದಿತ್ತು. ಇವರ ಪ್ರಜಾಪ್ರಭುತ್ವ ವಿರೋಧಿ ಮತ್ತು ಅನುಚಿತ ನಡೆ’ ಎಂದು ಟೀಕಿಸಿದ್ದಾರೆ.

ಐಐಎಂನ ಹಾಲಿ ಮತ್ತು ನಿವೃತ್ತ ಪ್ರಾಧ್ಯಾಪಕರ ಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೆ.ಶ್ರೀಧರ್ ರಾವ್‌, ಎಸ್.ಎಲ್.ಗಂಗಾಧರಪ್ಪ, ಎಂ.ಮದನ್‌ ಗೋಪಾಲ್‌, ಪಿ.ಬಿ.ರಾಮಮೂರ್ತಿ,  ಎಂ.ಲಕ್ಷ್ಮೀನಾರಾಯಣ, ರಮೇಶ್‌ ಝಳಕಿ, ಎನ್.ಪ್ರಭಾಕರ್‌, ಎಂ.ಎನ್.ಕೃಷ್ಣಮೂರ್ತಿ, ಗೋಪಾಲ್ ಹೊಸೂರ್‌, ಭಾಸ್ಕರ ರಾವ್‌, ಬ್ರಿಜ್ ಕಿಶೋರ್‌ ಸಿಂಗ್‌ ಸೇರಿದಂತೆ 23 ನಿವೃತ್ತ ಅಧಿಕಾರಿಗಳು ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಅವರಿಗೆ ಪತ್ರ ಬರೆದಿದ್ದರು.

‘ಐಐಎಂಬಿ ಹಾಲಿ ಮತ್ತು ನಿವೃತ್ತ ಪ್ರಾಧ್ಯಾಪಕರು ತಮ್ಮ ಪತ್ರದಲ್ಲಿ ಬಳಸಿರುವ ದ್ವೇಷದ ಭಾಷಣ, ಹಿಂಸಾತ್ಮಕ ಸಂಘರ್ಷ, ಅಲ್ಪಸಂಖ್ಯಾತರ ಮೇಲಿನ ದ್ವೇಷ ಮೊದಲಾದ ‍ಪದಗಳು ಅವರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಅವರ ದೃಷ್ಟಿಕೋನವನ್ನು ವಿರೋಧಿಸುವ ಮತ್ತೊಂದು ಗುಂಪಿನ ಅಧ್ಯಾಪಕರು, ವಿದ್ಯಾರ್ಥಿಗಳು ಮರುಹೇಳಿಕೆ ನೀಡಿದರೆ ಸಂಸ್ಥೆಯ ಆವರಣದಲ್ಲಿನ ಅತ್ಯುತ್ತಮ ಶೈಕ್ಷಣಿಕ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಟೀಕಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.