ADVERTISEMENT

ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ

ವಿಷಕಾರಿ ಅಂಶ ತೆಗೆದು ಹಾಕಲು ಸಗಣಿಯಲ್ಲಿನ ಬ್ಯಾಕ್ಟೀರಿಯಾ ಬಳಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 23:51 IST
Last Updated 12 ಜೂನ್ 2024, 23:51 IST
ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ
ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ   

ಬೆಂಗಳೂರು: ಅಂತರ್ಜಲದಲ್ಲಿ ಮಿಳಿತವಾಗಿರುವ ಮತ್ತು ಮಾನವ ದೇಹಕ್ಕೆ ಅತ್ಯಂತ ಅಪಾಯಕಾರಿ ಎನಿಸಿರುವ ಭಾರಲೋಹದ ಅಂಶ (ಆರ್ಸೆನಿಕ್‌) ಬೇರ್ಪಡಿಸುವ ಹೊಸ ಪರಿಹಾರ ವಿಧಾನವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮೂರು ಹಂತಗಳ ಈ ತಂತ್ರಜ್ಞಾನಕ್ಕೆ ಪೇಟೆಂಟ್‌ ಇನ್ನಷ್ಟೇ ಸಿಗಬೇಕಿದೆ. ನೀರಿನಿಂದ ಬೇರ್ಪಡಿಸಿದ ಭಾರಲೋಹವನ್ನು ಪರಿಸರಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲು ಸಾಧ್ಯವಿರುವುದು ಇದರ ವಿಶೇಷ. ವಿಷಕಾರಿ ಭಾರಲೋಹದಿಂದ ಕೂಡಿದ ಕೆಸರನ್ನು ಎಲ್ಲೆಂದರಲ್ಲಿ ಹರಿಸುವುದು, ಗುಂಡಿಗಳಲ್ಲಿ ತುಂಬಿ ಮತ್ತೆ ಭೂಮಿಯೊಳಗೆ ಹೋಗುವುದನ್ನೂ ಈ ಸಾಧನದಿಂದ ತಪ್ಪಿಸಬಹುದಾಗಿದೆ.

ಇನ್ನೂ ಒಂದು ಅಚ್ಚರಿಯ ಅಂಶ ಎಂದರೆ, ಜೈವಿಕ ನಿರ್ಜಲೀಕರಣ ವಿಧಾನಕ್ಕೆ ಹಸುವಿನ ಸಗಣಿಯಲ್ಲಿ ಸಿಗುವ ಒಂದು ಬಗೆಯ ಬ್ಯಾಕ್ಟೀರಿಯಾ ಬಳಸಲಾಗುತ್ತದೆ. ಈ ಬ್ಯಾಕ್ಟೀರಿಯಾ ಭಾರಲೋಹದಲ್ಲಿನ ವಿಷಕಾರಿ ಅಂಶಗಳನ್ನೂ ತೆಗೆದುಹಾಕುತ್ತದೆ ಎಂದು ಐಐಎಸ್‌ಸಿಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಯಜ್ಞಸೇನಿ ರಾಯ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಇವರ ಪ್ರಯೋಗಾಲಯದಲ್ಲೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ADVERTISEMENT

‘ನೀರು ಶುದ್ಧೀಕರಿಸುವ ತಂತ್ರಜ್ಞಾನದಲ್ಲಿ ಭಾರಲೋಹವನ್ನು ಬೇರ್ಪಡಿಸಿ ಶುದ್ಧ ನೀರನ್ನು ಪಡೆಯಬಹುದು. ಈ ರೀತಿ ಶುದ್ಧಿಕರಿಸಿದ ಬಳಿಕ ಉಳಿಯುವ ಭಾರಲೋಹದ ಕೆಸರು ಮತ್ತೆ ಭೂಮಿಗೆ ಸೇರದಂತೆ ನೋಡಿಕೊಳ್ಳಬೇಕು. ಆದರೆ, ಈಗ ಲಭ್ಯವಿರುವ ತಂತ್ರಜ್ಞಾನಗಳಲ್ಲಿ ಅದಕ್ಕೆ ಮಹತ್ವ ನೀಡಿಲ್ಲ. ನಮ್ಮ ತಂತ್ರಜ್ಞಾನ ಈ ಸಮಸ್ಯೆಗೆ ಪರಿಹಾರ ಒದಗಿಸಿದೆ’ ಎಂದು ಅವರು ಹೇಳಿದರು.

ದೇಶದ 21 ರಾಜ್ಯಗಳ 133 ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ 0.01 ಮಿಲಿಗ್ರಾಮ್‌ನಷ್ಟು ಆರ್ಸೆನಿಕ್‌ ಇದೆ. 23 ರಾಜ್ಯಗಳ 223 ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ 1.5 ಮಿಲಿಗ್ರಾಮ್‌ನಷ್ಟು ಫ್ಲೋರೈಡ್‌ ಅಂಶ ಇದೆ. ಇದು ಬ್ಯೂರೊ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಪ್ರಮಾಣಕ್ಕಿಂತಲೂ ಅಧಿಕ ಎಂದು ಅವರು ತಿಳಿಸಿದರು.

ನೀರು ಶುದ್ಧೀಕರಿಸುವ ಈ ಸಾಧನವನ್ನು ಎಲ್ಲಿ ಬೇಕಾದರೂ ಅತ್ಯಂತ ಸುಲಭವಾಗಿ ಜೋಡಿಸಿ ಬಳಕೆ ಮಾಡಬಹುದು. ಪ್ರಯೋಗಾಲಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟಕ್ಕೆ ಅನುಗುಣವಾಗಿ ಇಬ್ಬರು ವ್ಯಕ್ತಿಗಳಿಗೆ ಮೂರು ದಿನಗಳಿಗೆ ಬೇಕಾಗುವಷ್ಟು ನೀರು ಶುದ್ಧೀಕರಿಸಿ ನೀಡಲಾಗಿತ್ತು. ಸಂಶೋಧಕರು ಐಎನ್‌ಆರ್‌ಇಎಂ ಫೌಂಡೇಶನ್‌ ಮತ್ತು ಅರ್ಥ್‌ ವಾಚ್‌ ಸಂಸ್ಥೆಗಳ ಮೂಲಕ ಬಿಹಾರದ ಬಾಗಲ್ಪುರ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಈ ಪ್ರಯೋಗ ಮುಂದುವರೆಸಿದ್ದಾರೆ.

ಶುದ್ಧೀಕರಣದ ಹಂತಗಳು:

ಹಂತ 1: ಚಿಸ್ಟೋಸಾನ್‌ನಿಂದ ಮಾಡಿದ ಜೈವಿಕವಾಗಿ ಕರಗಬಲ್ಲ ಹೀರು ಹಾಸಿಗೆ ಮೇಲೆ ಭಾರಲೋಹದಿಂದ ಕಲುಷಿತಗೊಂಡ ನೀರನ್ನು ಹಾಯಿಸಲಾಗುತ್ತದೆ. (ಚಿಸ್ಟೋಸಾನ್‌ ಎಂದರೆ ಕಪ್ಪೆ ಚಿಪ್ಪು ಏಡಿ ಸೀಗಡಿಗಳ ಚಿಪ್ಪು ಮತ್ತು ಅಸ್ಥಿಪಂಜರಗಳಿಂದ ತಯಾರಿಸಿದ  ಸಕ್ಕರೆ ಮಾದರಿಯ ಕಣ. ಚಿಸ್ಟೋಸಾನ್‌ ಅನ್ನು ಔಷಧಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ) ಹೀರು ಹಾಸಿಗೆ ವಿಷಕಾರಿ ಭಾರಲೋಹವನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಎಲೆಕ್ಟ್ರೋಸ್ಟಾಟಿಕ್ ಫೋರ್ಸ್‌ ನೆರವಾಗುತ್ತದೆ. ಇದು ಕ್ಷಾರೀಯ ಅಂಶವನ್ನು ಚೆನ್ನಾಗಿ ತೊಳೆದು ಹಾಕುತ್ತದೆ.

ಹಂತ 2: ನೀರಿನಲ್ಲಿರುವ ಸೋಡಿಯಂ ಹೈಡ್ರಾಕ್ಸೈಡ್‌ ಮತ್ತು ಆರ್ಸೆನಿಕ್‌ ಅನ್ನು ಬೇರ್ಪಡಿಸಲಾಗುವುದು. ಕ್ಷಾರೀಯ ತೊಳೆಯುವಿಕೆ ಹಂತದಲ್ಲಿ ಭಾರಲೋಹ ಪ್ರತ್ಯೇಕಗೊಳ್ಳುತ್ತದೆ.

ಹಂತ 3: ಇದು ಅತ್ಯಂತ ಮಹತ್ವದ ಹಂತ. ಭಾರಲೋಹದಲ್ಲಿನ ವಿಷಕಾರಿ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಲಾಗುತ್ತದೆ. ಹಸುವಿನ ಸಗಣಿಯಲ್ಲಿ ಸಿಗುವ ಸೂಕ್ಷ್ಮಜೀವಿ ಅಥವಾ ಬ್ಯಾಕ್ಟೀರಿಯಾ ಮೂಲಕ ಆರ್ಸೆನಿಕ್‌ ಅನ್ನು ಮೀಥೆಲೀಕರಿಸಲಾಗುತ್ತದೆ. ಇದರಿಂದ ನೀರಿನಲ್ಲಿ ಭಾರ ಲೋಹದ ವಿಷದ ಪ್ರಮಾಣ ವಿಶ್ವ ಆರೋಗ್ಯ ಕೇಂದ್ರ ನಿಗದಿ ಮಾಡಿದ ಪ್ರಮಾಣಕ್ಕಿಂತಲೂ ಕಡಿಮೆ ಇರುತ್ತದೆ. ಇದು ಭೂಮಿಗೆ ಅಪಾಯಕಾರಿ ಅಲ್ಲ. ಬ್ಯಾಕ್ಟೀರಿಯಾ ಆಗಿ ಬಳಸುವ ಸಗಣಿಯನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದು. ಆರ್ಸೆನಿಕ್ ಅಂಶ ಸಾವಯವ ಸ್ವರೂಪಕ್ಕೆ ಪರಿವರ್ತನೆಗೊಂಡಿರುತ್ತದೆ. ಈ ವಿಧಾನದ ಮೂಲಕ ನೀರಿನಲ್ಲಿರುವ ಫ್ಲೋರೈಡ್‌ ಅಂಶವನ್ನು ಬೇರ್ಪಡಿಸಿ ತೆಗೆಯಲು ಸಾಧ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.