ಬೆಂಗಳೂರು: ಉಗ್ರಾಣ ನಿಗಮದ ಗೋದಾಮುಗಳ ನಿರ್ಮಾಣದಲ್ಲಿ ಅಕ್ರಮಗಳು ನಡೆದಿರುವುದರಿಂದ ಐಎಎಸ್ ಅಧಿಕಾರಿಗಳೂ ಸೇರಿ ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಹಾಗೂ ವಿಳಂಬಕ್ಕೆ ಕಾರಣರಾದ ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಧಿಕಾರಿಗಳಾದ ಎಂ.ಬಿ.ರಾಜೇಶ್‌ಗೌಡ, ಜಯವಿಭವಸ್ವಾಮಿ, ನವೀನ್‌ಕುಮಾರ್, ಹನುಮಂತರಾಯಪ್ಪ, ಎಂ.ಎಸ್.ಅಲಿಪುರ ಅವರ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಜರುಗಿಸಲಾಗುವುದು. ಆರ್ಥಿಕ ಅಶಿಸ್ತು, ನಿರ್ಮಾಣದಲ್ಲಿ ವಿಳಂಬ, ಮುಂಗಡವನ್ನು ಹೆಚ್ಚಳವಾಗಿ ಕೊಟ್ಟಿರುವುದು ಕಂಡು ಬಂದಿದೆ. ಇದರಿಂದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅವರು ಹೇಳಿದರು.
ಉಗ್ರಾಣ ನಿಗಮದ ಆರ್‌ಐಡಿಎಫ್–22 ಯೋಜನೆಯಡಿ ಅಪೂರ್ಣಗೊಂಡ ಉಗ್ರಾಣಗಳ ನಿರ್ಮಾಣ ಮತ್ತು ಅವಶ್ಯವಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹376.54 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.