ಬೆಂಗಳೂರು: ‘ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದ ಅಪರಾಧಿಗಳಾದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮತ್ತಿತರರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಕಠಿಣ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಿರುವ ಹೈಕೋರ್ಟ್, ₹44 ಕೋಟಿಗೂ ಹೆಚ್ಚಿನ ದಂಡದ ಮೊತ್ತದಲ್ಲಿ ಶೇ 25ರಷ್ಟನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಬೇಕು’ ಎಂದು ಆದೇಶಿಸಿದೆ.
ಈ ಸಂಬಂಧ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್ ಸೇರಿದಂತೆ ಆರು ಜನ ಅಪರಾಧಿಗಳ ಒಟ್ಟು 10 ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ‘ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಬೇಕು ಮತ್ತು ದಂಡದ ಮೊತ್ತಕ್ಕೆ ಸಂಬಂಧಿಸಿದಂತೆ ವಾದ ಮಾಡಬೇಕಿದೆ. ಈಗಲೇ ದಂಡದ ಮೊತ್ತ ಠೇವಣಿ ಇರಿಸುವಂತೆ ಆದೇಶಿಸಬಾರದು. ಅಂತಿಮ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಸಂಗತಿಯನ್ನು ಪರಿಗಣಿಸಬಹುದು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಶಿಕ್ಷೆ ಅಮಾನತಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಅರ್ಜಿದಾರರು ದಂಡದ ಮೊತ್ತವನ್ನು ಠೇವಣಿ ಇರಿಸಲು ವಿನಾಯಿತಿ ಕೋರುತ್ತಿರುವುದು ಸರಿಯಲ್ಲ. ಇವರಿಗೆಲ್ಲಾ ಆವತ್ತು ತಪ್ಪು ಮಾಡುವಾಗ ಭವಿಷ್ಯದಲ್ಲಿ ಇಂತಹ ಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಅರಿವಿರಲಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಇದು ಯಾರೋ ಹೊಟ್ಟೆ ಹಸಿದಿದೆ ಎಂದು ಬ್ರೆಡ್ ಅನ್ನು ಕದ್ದು ತಿಂದ ನಿರ್ಗತಿಕನ ಕಥೆಯಲ್ಲ. ಇವರೆಲ್ಲಾ ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ್ದಾರೆ. ವಿಚಾರಣಾ ನ್ಯಾಯಾಲಯ ಸೂಕ್ತವಾದ ರೀತಿಯಲ್ಲೇ ದಂಡ ವಿಧಿಸಿದೆ. ಅದನ್ನು ಪಾವತಿಸಲು ಆದೇಶಿಸಬೇಕು. ಇದರಲ್ಲಿ ವಿನಾಯಿತಿ ನೀಡಬಾರದು’ ಎಂದು ನ್ಯಾಯಪೀಠಕ್ಕೆ ಆಗ್ರಹಿಸಿದರು.
ವಾದ–ಪ್ರತಿವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಪರಾಧಿಗಳ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿತಲ್ಲದೇ ‘ದಂಡದ ಮೊತ್ತದಲ್ಲಿ ಶೇ 25ರಷ್ಟನ್ನು ಠೇವಣಿ ಇರಿಸಿ’ ಎಂದು ಅರ್ಜಿದಾರರಿಗೆ ಷರತ್ತು ವಿಧಿಸಿ ಆದೇಶಿಸಿತು.
ಮೆಸರ್ಸ್ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕರೂ ಆದ ಶಾಸಕ ಸತೀಶ್ ಸೈಲ್ ಮತ್ತು ಕೆ.ವಿ.ಎನ್.ಗೋವಿಂದ ರಾಜ್ ಅವರ ಆರು ಮೇಲ್ಮನವಿಗಳ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಹಾಗೂ ಎಸ್.ಸುನಿಲ್ ಕುಮಾರ್, ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪರ ಮತ್ತು ಕೆ.ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ್ ಪರ ಹಷ್ಮತ್ ಪಾಷ, ಪ್ರೇಮಚಂದ ಗರಗ್ ಪರ ಕಿರಣ್ ಜವಳಿ, ಮೆಸರ್ಸ್ ಸ್ವಸ್ತಿಕ್ ಸ್ಟೀಲ್ (ಹೊಸಪೇಟೆ) ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಅದರ ನಿರ್ದೇಶಕ ಕೆ.ವಿ.ನಾಗರಾಜ್ ಅಲಿಯಾಸ್ ಸ್ವಸ್ತಿಕ್ ನಾಗರಾಜ್ ಪರ ಎನ್.ವೆಂಕಟರಮಣ ನಾಯಕ್, ಆಶಾಪುರ ಮೈನ್ ಕೆಮ್ ಪರ ರವಿ ಬಿ.ನಾಯಕ್ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.