ADVERTISEMENT

ಪವನ ವಿದ್ಯುತ್‌: 112 ಎಕರೆಯಲ್ಲಿ ‘ಅಕ್ರಮ’ ಉತ್ಪಾದನೆ

ನಿಯಮ ಉಲ್ಲಂಘನೆಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಪರಿಸರ ಸಚಿವಾಲಯ ತಾಕೀತು

ಮಂಜುನಾಥ್ ಹೆಬ್ಬಾರ್‌
Published 3 ನವೆಂಬರ್ 2024, 23:40 IST
Last Updated 3 ನವೆಂಬರ್ 2024, 23:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಹಾಗೂ ಮಾರಿಕಣಿವೆ ಮೀಸಲು ಅರಣ್ಯದ 112 ಎಕರೆಯಲ್ಲಿ ನಿಯಮ ಉಲ್ಲಂಘಿಸಿ ಪವನ ವಿದ್ಯುತ್‌ ಉತ್ಪಾದಿಸಿದ ‍ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಪ್ರಾದೇಶಿಕ ಕಚೇರಿಗೆ ತಾಕೀತು ಮಾಡಿದೆ. 

ಮೀಸಲು ಅರಣ್ಯದ 548 ಎಕರೆಯಲ್ಲಿ ಪವನ ವಿದ್ಯುತ್‌ ಉತ್ಪಾದನೆಯ ಗುತ್ತಿಗೆಯನ್ನು ಮತ್ತೆ 15 ವರ್ಷಗಳಿಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ನಿಗಮವು (ಕೆಆರ್‌ಇಡಿಎಲ್‌) ರಾಜ್ಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆಗೆ ಗುತ್ತಿಗೆ ಪಡೆದ ಕಂಪನಿಗೆ (ವಿಂಡ್‌ ವರ್ಲ್ಡ್‌ ಇಂಡಿಯಾ ಲಿಮಿಟೆಡ್‌) ದಂಡ ವಿಧಿಸುವ ಷರತ್ತುಗಳೊಂದಿಗೆ ರಾಜ್ಯ ಸರ್ಕಾರವು ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಬಳಿಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸೆಪ್ಟೆಂಬರ್‌ 23ರಂದು ನಡೆದ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿತ್ತು. ‘ಸಚಿವಾಲಯದ ಪ್ರಾದೇಶಿಕ ಕಚೇರಿಯು ಸ್ಥಳ ಪರಿಶೀಲನೆಯ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘನೆಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿ ಸಮಿತಿಯು ಕಾರ್ಯಸೂಚಿಯನ್ನು ಮುಂದೂಡಿತ್ತು. ಅದರ ಬೆನ್ನಲ್ಲೇ, ಸಲಹಾ ಸಮಿತಿಯ ಅವಲೋಕನಗಳ ಬಗ್ಗೆ ಕ್ರಮ ಕೈಗೊಂಡು ಶೀಘ್ರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವಾಲಯದ ವನ್ಯಜೀವಿ ಸಂರಕ್ಷಣಾ ವಿಭಾಗವು ಪ್ರಾದೇಶಿಕ ಕಚೇರಿಗೆ ನಿರ್ದೇಶನ ನೀಡಿದೆ. 

ADVERTISEMENT

2003ರಲ್ಲಿ ಗುತ್ತಿಗೆ: 30 ವರ್ಷ ಪವನ ವಿದ್ಯುತ್‌ ಉತ್ಪಾದಿಸಲು ಅರಣ್ಯ ಅನುಮೋದನೆ ನೀಡುವಂತೆ ಅರಣ್ಯ ಇಲಾಖೆಗೆ ಕೆಆರ್‌ಇಡಿಎಲ್‌ 2002ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 15 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಇದಕ್ಕೆ ಕೇಂದ್ರ ಪರಿಸರ ಸಚಿವಾಲಯವು 2003ರ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು. ಬಳಿಕ ಈ ಜಾಗವನ್ನು ಕೆಆರ್‌ಇಡಿಎಲ್‌ ಉಪ ಗುತ್ತಿಗೆಗೆ ನೀಡಿತ್ತು. ಗುತ್ತಿಗೆ ಅವಧಿ 2018ರ ಜೂನ್‌ನಲ್ಲಿ ಮುಗಿದಿತ್ತು. 

ಕಾರ್ಯಾಚರಣೆ ಸ್ಥಗಿತಗೊಳಿಸಿದರೆ ಯಂತ್ರಗಳಿಗೆ ಹಾನಿಯಾಗುತ್ತದೆ ಎಂಬ ನೆಪ ಒಡ್ಡಿ ವಿದ್ಯುತ್‌ ಉತ್ಪಾದನೆಯನ್ನು ಮುಂದುವರಿಸಲಾಗಿತ್ತು. ಗುತ್ತಿಗೆ ಅವಧಿಯನ್ನು ಮತ್ತೆ 15 ವರ್ಷ ಮುಂದುವರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. 

ಅಕ್ರಮದ ಬೊಟ್ಟು ಮಾಡಿದ್ದ ಡಿಸಿಎಫ್‌: 

ಈ ನಡುವೆ, ಚಿತ್ರದುರ್ಗ ವಿಭಾಗದ ಡಿಸಿಎಫ್ ಅವರು 2020 ಹಾಗೂ 2022ರಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಗುತ್ತಿಗೆದಾರ ಸಂಸ್ಥೆಗೆ 221.80 ಹೆಕ್ಟೇರ್ (548 ಎಕರೆ) ಜಾಗ ಗುತ್ತಿಗೆ ನೀಡಲಾಗಿತ್ತು. ಆದರೆ, ಸಂಸ್ಥೆಯು ಹೆಚ್ಚುವರಿಯಾಗಿ 45 ಹೆಕ್ಟೇರ್‌ (112 ಎಕರೆ) ಬಳಸಿಕೊಂಡು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದೆ’ ಎಂದು ವರದಿ ಸಲ್ಲಿಸಿದ್ದರು. ಈ ಸಂಬಂಧ ದಂಡ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದ್ದರು. 

ಈ ಯೋಜನೆ ಮುಂದುವರಿಸಲು 2020ರಲ್ಲಿ ಅನುಮತಿ ನೀಡಿದ್ದು ಯಾವ ಆಧಾರದಲ್ಲಿ ಎಂದು ಅರಣ್ಯ ಸಲಹಾ ಸಮಿತಿಯು ಅರಣ್ಯ ಪಡೆಯ ಮುಖ್ಯಸ್ಥರಿಗೆ ಕಳೆದ ವರ್ಷ ವಿವರಣೆ ಕೇಳಿತ್ತು. ಇದನ್ನು ಅರಣ್ಯ ಕಾಯ್ದೆಯ ಉಲ್ಲಂಘನೆ ಎಂದು ಯಾಕೆ ಪರಿಗಣಿಸಬಾರದು ಎಂದೂ ಪ್ರಶ್ನಿಸಿತ್ತು. ಪವನ ವಿದ್ಯುತ್‌ ಯಂತ್ರಗಳ ಕನಿಷ್ಠ ನಿರ್ವಹಣೆ ಕೈಗೊಳ್ಳಲು ಅನುಮತಿ ನೀಡಲಾಗಿತ್ತು ಎಂದು ಅರಣ್ಯ ಪಡೆಯ ಮುಖ್ಯಸ್ಥರು ಈ ವರ್ಷದ ಆರಂಭದಲ್ಲಿ ಉತ್ತರ ನೀಡಿದ್ದರು. ಆ ನಂತರ ಅರಣ್ಯ ಇಲಾಖೆಯು, ‘ಬಳಕೆದಾರ ಸಂಸ್ಥೆ ನಡೆಸಿದ ಅತಿಕ್ರಮಣ ಹಾಗೂ ಇತರ ಉಲ್ಲಂಘನೆಗಳಿಗೆ ಸೂಕ್ತ ದಂಡ ವಿಧಿಸಬಹುದು’ ಎಂಬ ಶಿಫಾರಸಿನೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.