ಶಿರಹಟ್ಟಿ: ತಾಲ್ಲೂಕಿನ ಕಡಕೋಳ ಭಾಗಕ್ಕೆ ಹೊಂದಿ ಕೊಂಡಿರುವ ಕಪ್ಪತ್ತಗುಡ್ಡದ ಒಂದೂವರೆ ಎಕರೆಯಷ್ಟು ಭಾಗ ಗುರುವಾರ ಸಂಜೆ ಕುಸಿದಿದೆ. ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮಾಲಿಂಗೇಶ್ವರ ಮಠದ ಪಕ್ಕದ ಮಣ್ಣು ಜರಿದಿದೆ. ದೊಡ್ಡ ಬಂಡೆ ಕಲ್ಲುಗಳು ಉರುಳಿ ಬಿದ್ದಿವೆ. ಅಕ್ಕಪಕ್ಕದ ರೈತರಲ್ಲಿ ಆತಂಕ ಮನೆ ಮಾಡಿದೆ.
ರಭಸದ ಮಳೆ ಹಾಗೂ ಕಪ್ಪತ್ತಗುಡ್ಡದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಹೊಸಳ್ಳಿ ಗ್ರಾಮದ ಮನೆಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ. ಗ್ರಾಮದ ಸರ್ಕಾರಿ ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿ ಬಿಸಿಯೂಟದ ಆಹಾರ ಧಾನ್ಯ, ಪುಸ್ತಕ, ಶಾಲಾ ದಾಖಲೆಗಳು ಹಾಳಾಗಿವೆ.
ಬೆಂಬಿಡದೆ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿದ್ದು, ಕಡಕೋಳ ಗ್ರಾಮದ ಮಾಂತೇಶ ನಾದಿಗಟ್ಟಿ ಎಂಬುವವರ ನೆಲಮಹಡಿಯಲ್ಲಿ ನೀರಿನ ಸೆಲೆ ಉಂಟಾಗಿ ನೀರು ಸತತವಾಗಿ ಹರಿಯುತ್ತಿದೆ. ಇದರಿಂದ ಪೂರ್ತಿ ಕಟ್ಟಡ ಜಲಾವೃತಗೊಂಡಿದ್ದು, ಎರಡು ಗಂಟೆಗೊಮ್ಮೆ ಪಂಪ್‌ಸೆಟ್ ಮೂಲಕ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಸತತ ನೀರು ಬರುತ್ತಿರುವುದರಿಂದ ಕಟ್ಟಡ ಬೀಳುವ ಭಯದಲ್ಲಿ ಮಾಲೀಕ ಜೀವನ ನಡೆಸುವ ದುಸ್ಥಿತಿ ಎದುರಾಗಿದೆ.
‘ರೈತರ ಜಮೀನುಗಳಿಗೆ ಹಾನಿಯಾಗಿಲ್ಲ’
ಕಪ್ಪತ್ತಗುಡ್ಡ ಸುಮಾರು 1.5 ಎಕರೆಯಷ್ಟು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲೇ ಕುಸಿದಿದ್ದು, ಅಕ್ಕಪಕ್ಕದ ರೈತರ ಜಮೀನುಗಳಿಗೆ ಯಾವುದೇ ಹಾನಿಯಾಗಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಎರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.