ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಅದಿರು ಸಾಗಣೆ ಮಾಡಿ ರಾಜ್ಯದ ಬೊಕ್ಕಸಕ್ಕೆ ₹200 ಕೋಟಿಗೂ ಹೆಚ್ಚಿನ ಮೊತ್ತದ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದ ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿಗಳು ಎಂದು ತೀರ್ಮಾನಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಗುರುವಾರ ಪ್ರಕಟಿಸಿದರು. ಸಂಜೆ ತೀರ್ಪು ಹೊರಬೀಳುತ್ತಿದ್ದಂತೆಯೇ, ಅಪರಾಧಿಗಳನ್ನು ನ್ಯಾಯಾಲಯದಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕರೆದೊಯ್ದರು.
ಪ್ರಕರಣದ ಮೊದಲ ಆರೋಪಿ ಮಹೇಶ್ ಜೆ.ಬಿಳಿಯೆ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್ ಅವರನ್ನು ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ
ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ.ವಿ.ನಾಗರಾಜ್ ಮತ್ತು ಕೆ.ವಿ.ಗೋವಿಂದರಾಜ್, ಆಶಾಪುರ ಮೈನಿಂಗ್ ಕಂಪನಿ ಮಾಲೀಕ ಚೇತನ್ ಷಾ ಮತ್ತು ಲಾಲ್ ಮಹಲ್ ಕಂಪನಿ ಮಾಲೀಕ ಪ್ರೇಮ್ ಚಂದ್ ಗರಗ್ ಅವರೂ ದೋಷಿಗಳ ಪಟ್ಟಿಯಲ್ಲಿದ್ದಾರೆ.
‘ಎಲ್ಲ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶುಕ್ರವಾರ ಪ್ರಕಟಿಸಲಿದ್ದಾರೆ. ದೋಷಾರೋಪ ಪಟ್ಟಿಯಲ್ಲಿದ್ದ ಪಿಜಿಎಸ್ ಕಂಪನಿಗೂ ಶಿಕ್ಷೆ ವಿಧಿಸಲಾಗಿದ್ದು, ಈ ಕಂಪನಿಯನ್ನೂ ದೋಷಿ ಎಂದು ತೀರ್ಮಾನಿಸಲಾಗಿದೆ. ಕಂಪನಿಗೆ ಕಾನೂನು ಪ್ರಕಾರ ದಂಡ ವಿಧಿಸುವ ನಿರೀಕ್ಷೆ ಇದೆ’ ಎಂದು ಸಿಬಿಐ ಪರ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ತಿಳಿಸಿದ್ದಾರೆ. ಮತ್ತೊಬ್ಬ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ ಅವರೂ ವಾದ ಮಂಡಿಸಿದ್ದರು.
‘ಪ್ರಕರಣದ ಆರೋಪಿಗಳಾಗಿದ್ದ ಕೆಲವರು ಅದಿರನ್ನು ನೇರವಾಗಿ ವಿದೇಶಗಳಿಗೆ ರಫ್ತು ಮಾಡಿದ್ದರೆ, ಮತ್ತೂ ಕೆಲವರು ಸತೀಶ್ ಸೈಲ್ ಕಂಪನಿಗೆ ಕಡಿಮೆ ದರಕ್ಕೆ ನೀಡಿದ್ದ ಮತ್ತು ಇನ್ನೂ ಕೆಲವರು ನೇರವಾಗಿ ಚೀನಾ ಸೇರಿದಂತೆ ಹಲವು ವಿದೇಶಗಳಿಗೆ ರಫ್ತು ಮಾಡಿದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ 2010ರ ಅಂದಾಜಿನಂತೆ ಒಟ್ಟು ₹200 ಕೋಟಿಗೂ ಹೆಚ್ಚಿನ ಮೊತ್ತವು ಬೊಕ್ಕಸಕ್ಕೆ ನಷ್ಟ ತಂದಿದೆ’ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ವಿವರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದೂರು ದಾಖಲಿಸಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. 2014ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.