ADVERTISEMENT

ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡ ತೆರವು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:27 IST
Last Updated 26 ಅಕ್ಟೋಬರ್ 2024, 14:27 IST
ಡಿ.ಕೆ. ಶಿವಕುಮಾರ್ 
ಡಿ.ಕೆ. ಶಿವಕುಮಾರ್    

ಬೆಂಗಳೂರು: ‘ಕಳಪೆ ಗುಣಮಟ್ಟದ ಮತ್ತು ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ಅಧಿಕಾರಿಗಳಿಗೆ ನೀಡಿದ್ದ ಅಧಿಕಾರವನ್ನು ‌ಹಿಂದಿನ ಸರ್ಕಾರ ಮೊಟಕುಗೊಳಿಸಿತ್ತು. ಆದರೆ, ನಾವು ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ’ ಎಂದರು.

‘ಅಕ್ರಮ ಆಸ್ತಿಗಳ ನೋಂದಣಿಯನ್ನೂ ತಕ್ಷಣ ನಿಲ್ಲಿಸಲಾಗುವುದು. ಇದೇ ವೇಳೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಗಮನಹರಿಸಲಾಗುವುದು’ ಎಂದರು.

ADVERTISEMENT

ಬೆಂಗಳೂರು ನಗರದಲ್ಲಿ ಮಳೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷಗಗಳು ಟೀಕಿಸುತ್ತಿರುವ ಬಗ್ಗೆ ಕೇಳಿದಾಗ, ‘ಬೆಂಗಳೂರು ನಗರದಲ್ಲಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವಿಗೀಡಾಗಿದ್ದಾರೆ. ಉಳಿದಂತೆ, ಕಳಪೆಮಟ್ಟದ ಕಟ್ಟಡ ಕುಸಿತದ ಹೊರತಾಗಿ ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದರು.

‘ಮಳೆಯಿಂದ ಹಾನಿಗೆ ಒಳಗಾಗುವ ಪ್ರದೇಶಗಳಲ್ಲಿನ ಜನರನ್ನು ಹೋಟೆಲ್‌ಗಳಿಗೆ ಸ್ಥಳಾಂತರಿಸಿ, ಅವರಿಗೆ ಊಟ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ದಿನದ 24 ತಾಸು‌ ಕೆಲಸ ಮಾಡಿದ್ದಾರೆ’ ಎಂದರು.

‘ಮಳೆಯಿಂದ ಉಂಟಾಗುವ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಏನು’ ಎಂಬ ಪ್ರಶ್ನೆಗೆ, ‘ಒಂದೇ ಬಾರಿಗೆ ಮಳೆನೀರುಗಾಲುವೆ ನಿರ್ಮಾಣ ಮಾಡುತ್ತಿದ್ದೇವೆ. ರಾಜಕಾಲುವೆ ಅಕ್ಕಪಕ್ಕ 50 ಅಡಿ ಜಾಗ ಬಿಟ್ಟು ರಸ್ತೆ ನಿರ್ಮಿಸಲು ನಿರ್ಧರಿಸಿದ್ದೇವೆ. ಹೀಗೆ ರಸ್ತೆ ನಿರ್ಮಿಸುವುದರಿಂದ ಕಟ್ಟಡಗಳಿಗೂ ರಕ್ಷಣೆ ಸಿಗಲಿದೆ. ಅಲ್ಲದೆ, ಕಾಲುವೆಗಳ ಸ್ವಚ್ಛತೆಗೂ ನೆರವಾಗಲಿದೆ. ಮೊದಲ ಹಂತದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.