ನವದೆಹಲಿ: ಉಡುಪಿ ಜಿಲ್ಲೆಯ ಕುದಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಪರಿಶೀಲನೆಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದೆ.
ಗ್ರಾಮದ ನಿವಾಸಿ ಗಣೇಶ ಕುಲಾಲ್ ಎಂಬುವರ ದೂರಿನ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧೀರ್ ಅಗರವಾಲ್ ಹಾಗೂ ಅಫ್ರೋಜ್ ಅಹ್ಮದ್ ಪೀಠವು, ಸಮಿತಿಯು ಎರಡು ತಿಂಗಳುಗಳಲ್ಲಿ ದಕ್ಷಿಣ ವಲಯ ಪೀಠಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ವಾಮನ ನಾಯ್ಕ್ ಎಂಬುವರಿಗೆ ಕೃಷಿ ಉದ್ದೇಶಕ್ಕೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ, ಅವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯಿಂದ ಜನರು ಭಯಭೀತರಾಗಿದ್ದಾರೆ ಎಂದು ಗಣೇಶ ಕುಲಾಲ್ ದೂರಿನಲ್ಲಿ ತಿಳಿಸಿದ್ದರು.
ಗಣಿಗಾರಿಕೆ ಸಂದರ್ಭದಲ್ಲಿ ಪರಿಸರ ಕಾನೂನು ಉಲ್ಲಂಘನೆ ಆಗಿದೆಯಾ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆಯಾ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.