ಹೂವಿನಹಡಗಲಿ (ಬಳ್ಳಾರಿ): ಜಿನುಗು ಕೆರೆ ನಿರ್ಮಿಸಲು ತಾಲ್ಲೂಕಿನ ತುಂಬಿನಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನೂರಾರು ಗಿಡ ಮರಗಳನ್ನು ನಾಶಪಡಿಸಿರುವ ಆರೋಪದ ಮೇಲೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಹಾಗೂ ಗುತ್ತಿಗೆದಾರನ ವಿರುದ್ಧ ಸೋಮವಾರ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ.
ಗಿಡ, ಮರಗಳ ತೆರವಿಗೆ ಬಳಸಿದ್ದ ಹಿಟಾಚಿ, ಟ್ರಾಕ್ಟರ್, ಟ್ಯಾಂಕರ್, 10 ಘನ ಮೀಟರ್ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಿಟಾಚಿ ಚಾಲಕ ಓರ್ವಾಯಿ ಗ್ರಾಮದ ಬಸವರಾಜ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂಬರ್ 176ರಲ್ಲಿ ಸಣ್ಣ ನೀರಾವರಿ ಇಲಾಖೆ ₹1 ಕೋಟಿ ಮೊತ್ತದ ಜಿನುಗು ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಅರಣ್ಯ ಇಲಾಖೆ ಅನುಮತಿ ಪಡೆಯದೇ ಭಾನುವಾರ ಬೆಳಿಗ್ಗೆ ಹಿಟಾಚಿ ಬಳಸಿ ಗಿಡಮರ ತೆರವುಗೊಳಿಸಲಾಗಿದೆ.
ಅರಣ್ಯದಲ್ಲಿ ಕಾರ್ಯಾಚರಣೆ ನೋಡಿದ ಸುತ್ತಲ ಗ್ರಾಮಗಳ ಜನರೂ ಅರಣ್ಯಕ್ಕೆ ನುಗ್ಗಿ ಗಿಡಮರಗಳನ್ನು ಕಡಿದು ಸಾಗಿಸಿದ್ದಾರೆ. ಒಂದೇ ದಿನ ವಿವಿಧ ಜಾತಿಯ 500ಕ್ಕೂ ಹೆಚ್ಚು ಗಿಡಗಳು ಹನನವಾಗಿವೆ. ಎರಡರಿಂದ ಮೂರು ಎಕರೆ ಅರಣ್ಯ ಪ್ರದೇಶ ಬೋಳಾಗಿದೆ.
ವಿಷಯ ತಿಳಿದು ಬಳ್ಳಾರಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಕಲ್ಲಮ್ಮನವರ ಕಿರಣಕುಮಾರ್ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಜಿನುಗು ಕೆರೆ ಕಾಮಗಾರಿ ಗುತ್ತಿಗೆದಾರ ಬಳ್ಳಾರಿಯ ಯರಿಬಸವನಗೌಡ ಮೊದಲ ಆರೋಪಿಯಾಗಿದ್ದು, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎರಡನೇ ಆರೋಪಿಯಾಗಿದ್ದಾರೆ.
ಅರಣ್ಯದಿಂದ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಿಸಿರುವ ಮತ್ತೊಂದು ಪ್ರಕರಣದಲ್ಲಿ ಟ್ರಾಕ್ಟರ್ ಮತ್ತು ಟಾಟಾ ಏಸ್ ವಶಪಡಿಸಿಕೊಳ್ಳಲಾಗಿದೆ. ಟ್ರಾಕ್ಟರ್ ಮಾಲೀಕ ತುಂಬಿನಕೇರಿ ಸಣ್ಣ ತಾಂಡಾದ ಸೋಮಿನಾಯ್ಕ, ಟಾಟಾ ಏಸ್ ಮಾಲೀಕ ಹರಪನಹಳ್ಳಿ ತಾಲ್ಲೂಕು ಚನ್ನಳ್ಳಿ ತಾಂಡಾದ ಮಲ್ಲೇಶ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿ ಕಿರಣಕುಮಾರ್ ತಿಳಿಸಿದ್ದಾರೆ.
***
ಜಿನುಗು ಕೆರೆ ಅಭಿವೃದ್ಧಿ ಖಾಸಗಿ ಜಮೀನಿನಲ್ಲಿ ನಡೆಯಲಿದೆ. ಮಾಹಿತಿ ಕೊರತೆಯಿಂದ 10-20 ಮೀಟರ್ ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ ವೆಂಕಟೇಶ.
- ಪ್ರಭಾರ ಎಇಇ, ಸಣ್ಣ ನೀರಾವರಿ ಇಲಾಖೆ, ಹೂವಿನಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.