ADVERTISEMENT

ಅಕ್ರಮ ಹೂಳು: ಬೊಕ್ಕಸಕ್ಕೆ ₹71.45 ಲಕ್ಷ ನಷ್ಟ– ಸಿ.ಎಸ್‌. ಷಡಾಕ್ಷರಿ ಸ್ಪಷ್ಟನೆ

ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಭಾಗಿ

ಸಚ್ಚಿದಾನಂದ ಕುರಗುಂದ
Published 12 ಆಗಸ್ಟ್ 2023, 23:30 IST
Last Updated 12 ಆಗಸ್ಟ್ 2023, 23:30 IST
   

ಬೆಂಗಳೂರು: ಶಿವಮೊಗ್ಗ ತಾಲ್ಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಹೂಳು (ಮಣ್ಣು) ತೆಗೆದು ಸರ್ಕಾರದ ಬೊಕ್ಕಸಕ್ಕೆ ₹71.45 ಲಕ್ಷಕ್ಕೂ ಹೆಚ್ಚು ನಷ್ಟ ಮಾಡಿರುವುದು ಪತ್ತೆಯಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅಧ್ಯಕ್ಷರಾಗಿರುವ ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವೇ ಈ ಕೃತ್ಯದಲ್ಲಿ ಭಾಗಿಯಾಗಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಕಾರ್ಯಪಾಲಕ ಎಂಜಿನಿಯರ್‌ ಅವರು ಅಕ್ರಮವಾಗಿ ಹೂಳು ಸಾಗಿಸಿರುವ ಕುರಿತು ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಈ ವರದಿ ಪ್ರತಿ ’ಪ್ರಜಾವಾಣಿ‘ಗೆ ಲಭ್ಯವಾಗಿದೆ.

ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಕಾನೂನುಬಾಹಿರವಾಗಿ ಮಣ್ಣು ತೆಗೆದು ಖಾಸಗಿ ಲೇಔಟ್‌ಗಳಿಗೆ ಸಾಗಿಸಲಾಗಿದೆ. ಕೇವಲ 500 ಲೋಡ್‌ಗೆ ಅನುಮತಿ ಪಡೆದಿದ್ದರೂ, 15,004 ಲೋಡು ಮಣ್ಣನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿದೆ.

ADVERTISEMENT

ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಸಾಗಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಜಗದೀಶ್‌ ಈ ಬಗ್ಗೆ ದೂರು ಸಲ್ಲಿಸಿದ್ದರು.

ಪ್ರಕರಣದ ವಿವರ:

ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು, ವಸತಿ ಬಡಾವಣೆ ನಿರ್ಮಿಸಲು ಇದೇ ವರ್ಷ ಮಾರ್ಚ್‌ 23ರಂದು ಮುದ್ದಣ್ಣನ ಕೆರೆಯಿಂದ 500 ಲೋಡು ಮಣ್ಣು ತೆಗೆಯಲು ನಿರಾಕ್ಷೇಪಣಾ ಪತ್ರವನ್ನು ಅಬ್ಬಲಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ಎಸ್‌.ಜಿ. ಅವರಿಂದ ಪಡೆದಿದ್ದರು.

ಆದರೆ, ಕೆರೆಯ ಮೂಲ ಒಡೆತನ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಸ್ವಾಧೀನದಲ್ಲಿದೆ.

40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ ಜಿಲ್ಲಾ ಪಂಚಾಯಿತಿ ಕೆರೆಗಳನ್ನು ’ಪಂಚಾಯಿತಿ ಕೆರೆ‘ ಎಂದು ನಾಮಕರಣ ಮಾಡಿ, ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಕೆರೆಯಲ್ಲಿ ಹೂಳು ತೆಗೆಯಲು ಮೂಲ ಇಲಾಖೆಯ ಅನುಮತಿ ಪಡೆಯಬೇಕು. ಕೆರೆಗಳಿಂದ ಮೂರು ಅಡಿಗಳಿಗಿಂತ ಆಳದಲ್ಲಿ ಹೆಚ್ಚು ಹೂಳು ತೆಗೆಯಲು ನಿರ್ಬಂಧ ವಿಧಿಸಿರುವ ಕುರಿತು ಶಿವಮೊಗ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿಡಿಒಗಳಿಗೆ ಪತ್ರ ಬರೆದಿದ್ದರು. ಆದರೂ,  ಅಬ್ಬಲಗೆರೆ ಗ್ರಾಮ ಪಂಚಾಯಿತಿ ಪಿಡಿಒ, ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

‌ಹಿರಿಯ ಭೂವಿಜ್ಞಾನಿಗಳು ಕೆರೆಯಿಂದ ತೆಗೆದ ಮಣ್ಣಿಗೆ ಕೇವಲ ₹40 ಸಾವಿರ ರಾಜಧನ ನಿಗದಿ ಮಾಡಿದ್ದು, ಜತೆಗೆ, ಕೆರೆಯಲ್ಲಿ ಮರಳು ಇದೆ ಎಂದು ಭಾವಿಸಿ ₹16ಸಾವಿರ ರಾಜಧನ ವಸೂಲಿ ಮಾಡಿದ್ದಾರೆ.

ಕೆರೆಯ ಅಂಗಳದಲ್ಲಿ ₹72,01,920  ರಾಜಧನದ ಮೊತ್ತದಷ್ಟು ಹೂಳು ತೆಗೆಯಲಾಗಿದೆ.  ಆದರೆ,  ಕೇವಲ ₹56 ಸಾವಿರ ಮಾತ್ರ ಪಾವತಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಅಗಾಧ ನಷ್ಟ ಉಂಟು ಮಾಡಲಾಗಿದೆ. ರಾಜಧನದ ಮೊತ್ತವನ್ನು ಹಿರಿಯ ಭೂವಿಜ್ಞಾನಿಗಳ ಬದಲಾಗಿ ಕೆರೆಯ ಒಡೆತನವಿರುವ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ಪಾವತಿಸಬೇಕಾಗಿತ್ತು. ಇದರಲ್ಲೂ ಸಹ ತಪ್ಪು ಮಾಡಿರುವುದು ಪತ್ತೆಯಾಗಿದೆ ಎಂದೂ ವರದಿ ಹೇಳಿದೆ.

ತನಿಖಾ ವರದಿಯ ಸಾರಾಂಶ

l ಅಂದಾಜುಪಟ್ಟಿ ಪ್ರಕಾರ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಳನ್ನು ಅಕ್ರಮವಾಗಿ ಖಾಸಗಿ ಲೇಔಟ್‌ಗೆ ಸಾಗಿಸಲಾಗಿದೆ.

l ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಹಿರಿಯ ಅಧಿಕಾರಿಗಳ ಆದೇಶ ಉಲ್ಲಂಘಿಸಿ ಅಕ್ರಮವಾಗಿ ಹೂಳು ತೆಗೆಯಲು ನಿರಾಕ್ಷೇಪಣಾ ಪತ್ರ ನೀಡಿದ್ದಾರೆ.

l ಮುದ್ದಣ್ಣನ ಕೆರೆಗೂ ಮತ್ತು ಹಿರಿಯ ಭೂವಿಜ್ಞಾನಿಗಳಿಗೂ ಯಾವುದೇ ಸಂಬಂಧ ಇಲ್ಲ. ಶಿವಮೊಗ್ಗದ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಮಾತ್ರ ಇದು ಸಂಬಂಧಿಸಿದ್ದು.

l ಕೆರೆ ಹೂಳನ್ನು ಹದಿನೈದು ಅಡಿ ಆಳದವರೆಗೆ ತೆಗೆದಿರುವುದು ಕಾನೂನುಬಾಹಿರ.

l ಕೆರೆ ಹೂಳನ್ನು ಖಾಸಗಿ ಲೇಔಟ್‌ಗೆ ತೆಗೆದುಕೊಂಡು ಹೋಗಲು ಅನುಮತಿ ಕೋರಿರುವವರು ಮತ್ತು ತೆಗೆದುಕೊಂಡು ಹೋದವರು ಸಹ ಅಕ್ರಮದಲ್ಲಿ ಭಾಗಿ.

l ಕೆರೆ ಹೂಳಿಗೆ ರಾಜಧನದ ಮೊತ್ತ ₹71.45 ಲಕ್ಷ ಮೊತ್ತವನ್ನು ಪಾವತಿಸದೆ ಅಕ್ರಮವಾಗಿ ಸಾಗಿಸಿರುವುದು ಸಾಬೀತು.

ನಮಗೆ ಸಂಬಂಧವೇ ಇಲ್ಲ: ಷಡಾಕ್ಷರಿ

’ಕೆರೆ ಮಣ್ಣಿಗೂ ನಮಗೂ ಸಂಬಂಧವೇ ಇಲ್ಲ. ಸಮಗ್ರ ತನಿಖೆ ನಡೆಯಲಿ. ಖಾಸಗಿ ಡೆವಲಪರ್ಸ್‌ನವರು ನಿವೇಶನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಣ್ಣು ತೆಗೆದಿದ್ದಕ್ಕೆ ಅವರು ರಾಜಧನ ಪಾವತಿಸಿದ್ದಾರೆ. ನಾವು ಕೆರೆ ಮಣ್ಣು ತೆಗೆದಿಲ್ಲ. ಹೀಗಾಗಿ, ಸಂಘದಿಂದ ರಾಜಧನ ಪಾವತಿಸುವ ಅಥವಾ ಹೆಚ್ಚು ಮಣ್ಣು ತೆಗೆದಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಘದ ಹೆಸರಿನಲ್ಲಿ ಜಾಗವೂ ಇಲ್ಲ, ಬಡಾವಣೆಯೂ ಇಲ್ಲ. ಡೆವಲಪರ್ಸ್‌ ಅವರಿಂದ ನಿವೇಶನಗಳನ್ನು ಖರೀದಿಸಲು ಒಪ್ಪಂದ ಮಾತ್ರ ಮಾಡಿಕೊಂಡಿದ್ದೇವೆ. ಕೆರೆಯಲ್ಲಿನ ಹೂಳನ್ನು ಅನುಮತಿ ಇಲ್ಲದೆಯೇ ಇತರ 15–20 ಮಂದಿ ಸಹ ತೆಗೆದಿದ್ದಾರೆ. ನಿಯಮಗಳ ಪ್ರಕಾರ ನಾವು ಖಾಸಗಿ ಡೆವಲಪರ್ಸ್‌ ಪರವಾಗಿ ಅನುಮತಿಗಾಗಿ ಗ್ರಾಮ ಪಂಚಾಯಿತಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಮಾತ್ರ ನೀಡಲಾಗಿತ್ತು. ಈ ಇಲಾಖೆಗಳು ನಿಯಮಗಳ ಅನುಸಾರ ಕ್ರಮಕೈಗೊಂಡಿವೆ‘ ಎಂದು ಸಿ.ಎಸ್‌. ಷಡಾಕ್ಷರಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.