ಬೆಂಗಳೂರು: 40,000ಕ್ಕೂ ಹೆಚ್ಚು ಜನರಿಗೆ 4,000 ಕೋಟಿಗೂ ಅಧಿಕ ಹಣ ವಂಚಿಸಿರುವ ಐಎಂಎ ಸಮೂಹ ಕಂಪನಿಗೆ ಸೇರಿದ ₹209 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ನಡೆಸುತ್ತಿರುವ ಇ.ಡಿ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಹಾಗೂ ನಿರ್ದೇಶಕರ ಹೆಸರಿನಲ್ಲಿರುವ 20 ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ. ಈ ಕಟ್ಟಡಗಳು ಬೆಂಗಳೂರು, ದಾವಣಗೆರೆ ಹಾಗೂ ಹಾಸನಗಳಲ್ಲಿ ಇವೆ.
ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿದ್ದ ₹ 11 ಕೋಟಿ, 51 ವಿವಿಧ ಖಾತೆಗಳಲ್ಲಿದ್ದ ₹ 98 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿದ್ದ ಒಟ್ಟು 105 ಖಾತೆಗಳನ್ನು ಇ.ಡಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಕಂಪನಿ ₹ 4,000 ಕೋಟಿ ದೋಚಿರುವ ಸಂಗತಿ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಮನ್ಸೂರ್ ಖಾನ್, ತನ್ನ ಮತ್ತು ಇತರ ನಿರ್ದೇಶಕರ ಹೆಸರಿನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಲು ದುರ್ಬಳಕೆ ಮಾಡಿಕೊಂಡಿದ್ದಾರೆ. ನೋಟು ರದ್ದತಿ ಸಮಯದಲ್ಲಿ ಮನ್ಸೂರ್ ಖಾನ್ ವಿವಿಧ ಬ್ಯಾಂಕ್‌ಗಳಲ್ಲಿ 44 ಕೋಟಿ ಇಟ್ಟಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಈ ಹಣ ಪತ್ತೆಯಾಗಿತ್ತು. ಪಿಎಂಜಿಕೆವೈ ಅಡಿ ₹ 22 ಕೋಟಿ ತೆರಿಗೆ ಕಟ್ಟಿಸಿಕೊಂಡು ಇದನ್ನು ಕ್ರಮಬದ್ಧಗೊಳಿಸಲಾಗಿತ್ತು. ಇ.ಡಿ ಈಗ ಜಪ್ತಿ ಮಾಡಿರುವುದು ಇದೇ ₹ 11 ಕೋಟಿ ಹಣ ಎಂದು ಮೂಲಗಳು ತಿಳಿಸಿವೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ತಪ್ಪಿಸಿಕೊಂಡಿರುವ ಮನ್ಸೂರ್ ಖಾನ್ ಪತ್ತೆಗೆ ‘ರೆಡ್ ಕಾರ್ನರ್ ನೋಟಿಸ್’ ಹೊರಡಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಇ.ಡಿ ಆರಂಭಿಸಿದೆ. ದೇಶ ಬಿಟ್ಟು ಪರಾರಿ ಆಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿಯೂ ಕ್ರಮ ಕೈಗೊಳ್ಳುವ ಸಂಭವವಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಐಎಂಎ ವಂಚನೆ ಪ್ರಕರಣದ ವಿರುದ್ಧ ಜೂನ್ 9ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 12ರಂದು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಸಿಐಆರ್ ದಾಖಲಿಸಿದ ಇ.ಡಿ ಕೇವಲ 15 ದಿನಗಳಲ್ಲಿ ಐಎಂಎ ಕಂಪನಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದೆ.
ವಿಭಾಗೀಯ ನ್ಯಾಯಪೀಠಕ್ಕೆ ಅರ್ಜಿ ವರ್ಗ
‘ಬಹುಕೋಟಿ ವಂಚನೆಯ ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಏಕಸದಸ್ಯ ನ್ಯಾಯಪೀಠ ವಿಭಾಗೀಯ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
ಈ ಕುರಿತಂತೆ ನಿವೃತ್ತ ತೆರಿಗೆ ಅಧಿಕಾರಿ ಎಸ್.ಎಂ.ಇಕ್ಬಾಲ್ ಅಹ್ಮದ್ ಸೇರಿದಂತೆ 17 ಜನ ಹೂಡಿಕೆದಾರರು ಸಲ್ಲಿಸಿರುವ ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
‘ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ. ಹೀಗಾಗಿ ಈ ಪ್ರಕರಣವನ್ನೂ ಅದರ ಜೊತೆಯಲ್ಲೇ ವಿಚಾರಣೆ ನಡೆಸುವುದು ಸೂಕ್ತ’ ಎಂಬ ಅಭಿಪ್ರಾಯದೊಂದಿಗೆ ವರ್ಗಾವಣೆಗೆ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.