ಬೆಂಗಳೂರು: ಐಎಂಎ ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಆಹಾರ ಮತ್ತು ನಾಗರಿಕಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿತು.
ತಮ್ಮ ವಕೀಲರ ಜೊತೆ ಬೆಳಿಗ್ಗೆ 11ಕ್ಕೆ ಇ.ಡಿ ಅಧಿಕಾರಿಗಳ ಮುಂದೆ ಹಾಜರಾದ ಜಮೀರ್ ಅಹಮದ್ ಅವರನ್ನು ಮಧ್ಯಾಹ್ನ 1.15ರವರೆಗೂ ವಿಚಾರಣೆ ನಡೆಸಿದರು. ಇಲ್ಲಿನ ರಿಚ್ಮಂಡ್ ಟೌನ್‌ನ ಸರ್ಪಂಟೈನ್ ರಸ್ತೆಯಲ್ಲಿರುವ ತಮ್ಮ ನಿವೇಶನವನ್ನು ₹ 5 ಕೋಟಿಗೆ ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಅವರಿಗೆ ಮಾರಾಟ ಮಾಡಿರುವ ಪ್ರಕರಣದಲ್ಲಿ ವಿಚಾರಣೆ ನಡೆಯಿತು.
‘2018ರಲ್ಲಿ ನಡೆದಿರುವ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಕ್ರಯ ಪತ್ರ ಮತ್ತಿತರ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದ್ದರು. ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಅಲ್ಲದೆ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆಸ್ತಿ ವಿವರಗಳು ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಪ್ರತಿಗಳನ್ನು ಸಲ್ಲಿಸಿದ್ದೇನೆ’ ಎಂದು ಜಮೀರ್ ತಿಳಿಸಿದರು.
‘ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾನು ಸಲ್ಲಿಸಿರುವ ಆಸ್ತಿ ವಿವರದಲ್ಲೂ ಈ ವ್ಯವಹಾರ ಕುರಿತು ಪ್ರಸ್ತಾಪಿಸಿದ್ದೇನೆ. ಈ ಆಸ್ತಿ ಮಾರಾಟಕ್ಕೆ ಸಂಬಂಧ ಮಾಹಿತಿ ನೀಡಿಲ್ಲ ಎಂಬ ಭಾವನೆ ಇ.ಡಿ ಅಧಿಕಾರಿಗಳಿಗಿತ್ತು.ಅದನ್ನು ನಿವಾರಿಸುವ ಪ್ರಯತ್ನ ಮಾಡಿದ್ದೇನೆ’ ಎಂದೂ ಜಮೀರ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.