ಬೆಂಗಳೂರು: ಸುಮಾರು ₹ 4,000 ಕೋಟಿ ರೂಪಾಯಿ ಮೌಲ್ಯದ ಐಎಂಎ ವಂಚನೆ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿದಂತೆ ಹಲವರ ವಿರುದ್ಧ ಸಿಬಿಐ ತನಿಖಾ ತಂಡ ಶನಿವಾರ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್, ಕೆಎಎಸ್ ಅಧಿಕಾರಿ ಎಲ್.ಸಿ. ನಾಗರಾಜ್ ಸೇರಿದಂತೆ ಕೆಲವರ ವಿರುದ್ಧ ಸಿಬಿಐ ಈ ಹಿಂದೆಯೇ ಆರೋಪಪಟ್ಟಿ ಸಲ್ಲಿಸಿತ್ತು. ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರ ಸೆಪ್ಟೆಂಬರ್‌ನಲ್ಲಿ ಸಿಬಿಐಗೆ ಅನುಮತಿ ನೀಡಿತ್ತು. ಶನಿವಾರ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ 28 ಮಂದಿಯ ವಿರುದ್ಧ ದೋಷಾರೋಪ ಹೊರಿಸಿದ್ದಾರೆ.
ಮನ್ಸೂರ್ ಖಾನ್, ಬೆಂಗಳೂರು ಉತ್ತರ ಉಪ ವಿಭಾಗದ ಆಗಿನ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಆಗಿನ ಡಿವೈಎಸ್‌ಪಿ ಇ.ಬಿ. ಶ್ರೀಧರ್, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್, ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಎಂ. ರಮೇಶ, ಸಬ್ ಇನ್‌ಸ್ಪೆಕ್ಟರ್ ಪಿ. ಗೌರಿಶಂಕರ್ ಮತ್ತು ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
‘ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಐಎಂಎ ಕಂಪನಿಯ ವಿರುದ್ಧ ‘ಕರ್ನಾಟಕ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣಾ (ಕೆಪಿಐಡಿ) ಕಾಯ್ದೆ’ ಅಡಿಯಲ್ಲಿ ವಿಚಾರಣೆ ನಡೆಸಿದ್ದರು. ಕಂಪನಿ ಹೂಡಿಕೆದಾರರಿಗೆ ವಂಚನೆ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭಿಸಿದ್ದರೂ, ಸತ್ಯಾಂಶ ಮುಚ್ಚಿಟ್ಟು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು’ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ.
ಕೆಪಿಐಡಿ ಕಾಯ್ದೆಯಡಿ ವಿಚಾರಣೆ ನಡೆಸುವಾಗ, ವಂಚಕ ಕಂಪನಿಯ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಬದಲಾಗಿ, ಕಂಪನಿಯ ನಿರ್ದೇಶಕರು ತಪ್ಪೆಸಗಿಲ್ಲ ಎಂಬ ವರದಿಗಳನ್ನು ನೀಡಲಾಗಿತ್ತು. ಸಾವಿರಾರು ಮಂದಿ ಹೂಡಿಕೆದಾರರಿಗೆ ವಂಚನೆ ಆಗುತ್ತಿದ್ದರೂ, ಕಂಪನಿಯ ವಿರುದ್ಧದ ವಿಚಾರಣೆಯನ್ನು ಮುಕ್ತಾಯಗೊಳಿಸಲು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಶಿಫಾರಸು ಮಾಡಿದ್ದರು ಎಂದು ತನಿಖಾ ತಂಡ ಹೇಳಿದೆ.
‘ಐಎಂಎ ವಿರುದ್ಧ ಆರಂಭಿಕ ಹಂತದಲ್ಲಿ ವಿಚಾರಣೆ ನಡೆಸಿದ್ದ ನಿಂಬಾಳ್ಕರ್, ಕಂಪನಿಯ ಪರವಾದ ವರದಿ ಸಿದ್ಧಪಡಿಸಿದ್ದರು. ಇನ್‌ಸ್ಪೆಕ್ಟರ್ ರಮೇಶ ನೀಡಿದ್ದ ವರದಿಯನ್ನು ಮುಚ್ಚಿಹಾಕಲು ಹಿಲೋರಿ ಯತ್ನಿಸಿದ್ದರು. ಇದಕ್ಕಾಗಿ ಐಎಂಎ ಕಂಪನಿಯಿಂದ ಹಲವು ಬಾರಿ ಹಣ, ಪೀಠೋಪಕರಣ ಬಿಲ್ ಪಾವತಿಯಂತಹ ಲಾಭ ಪಡೆದಿದ್ದರು. ಅಕ್ರಮಕ್ಕೆ ನೆರವಾದ ಪೊಲೀಸರು, ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‌ನಿಂದ ಅನೇಕ ಬಾರಿ ಹಣ ಪಡೆದಿದ್ದರು’ ಎಂದು ಸಿಬಿಐ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಕೋರಿ ಸಲ್ಲಿಸಿದ್ದ ಪ್ರಸ್ತಾವದಲ್ಲಿ ಉಲ್ಲೇಖಿಸಿತ್ತು. ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈವರೆಗೆ ಹಲವು ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.