ಬೆಂಗಳೂರು: ಐಎಂಎ ಕಂಪನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
21ನೇಸಿಟಿ ಸಿವಿಲ್ ಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಶಿವರಾಮ ಅವರು ಮನ್ಸೂರ್ ಖಾನ್‌ಗೆ ಜಾಮೀನು ನೀಡಲು ನಿರಾಕರಿಸಿದರು.
‘ಅನಾರೋಗ್ಯ ಮತ್ತು ಕೋವಿಡ್ ಸಂದರ್ಭ ಆಧರಿಸಿ ಜಾಮೀನು ನೀಡಬೇಕು’ ಎಂದು ಮನ್ಸೂರ್ ಖಾನ್ ಪರ ವಕೀಲರು ಮನವಿ ಮಾಡಿದರು. ‘ಜೈಲಿನಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು,ಸೋಂಕು ಹರಡುವ ಪ್ರಶ್ನೆಯೇ ಇಲ್ಲ. ಅನಾರೋಗ್ಯ ಇದ್ದರೆ ವೈದ್ಯರು ಚಿಕಿತ್ಸೆ ನೀಡುತ್ತಾರೆ’ ಎಂದು ವಿಶೇಷ ಅಭಿಯೋಜಕ (ಸಿಬಿಐ) ಕೆ. ಸುದರ್ಶನ್ ವಾದಿಸಿದರು.
‘ಇದು ಗಂಭೀರ ಆರ್ಥಿಕ ಅಪರಾಧವಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ’ ಎಂದು ವಿಶೇಷ ಅಭಿಯೋಜಕ (ಇ.ಡಿ) ರಾಜೇಶ್ ರೈ ಹೇಳಿದರು.
‘ಪ್ರಕರಣ ದಾಖಲಾದ ಸಂದರ್ಭದಲ್ಲಿ ಮನ್ಸೂರ್ ಭಾರತದಲ್ಲಿ ಇರಲಿಲ್ಲ. ದೆಹಲಿಗೆ ಪಲಾಯನ ಮಾಡುವಂತೆ ತನ್ನ ಕಂಪನಿ ಉದ್ಯೋಗಿಗಳಿಗೆ ದಾರಿ ತಪ್ಪಿಸುವ ಸೂಚನೆ ನೀಡಿದ್ದ. ಜಾಮೀನು ನೀಡಿದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸಿಬಿಐ ಮತ್ತು ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿ ಪ್ರಕಾರ,55 ಸಾವಿರಕ್ಕೂ ಹೆಚ್ಚು ಜನರಿಂದ ₹4 ಸಾವಿರ ಕೋಟಿಯನ್ನು ಮನ್ಸೂರ್ ಖಾನ್ ಸಂಗ್ರಹಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.