ADVERTISEMENT

ಐಎಂಎ ವಂಚನೆ ಪ್ರಕರಣ: ಬಿಡಿಎ ಕುಮಾರ್‌ ವಿರುದ್ಧ ಆರೋಪಪಟ್ಟಿ

₹ 5 ಕೋಟಿ ಲಂಚ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಪಿ.ಡಿ. ಕುಮಾರ್
ಪಿ.ಡಿ. ಕುಮಾರ್   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ₹ 5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿಂದಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿ.ಡಿ. ಕುಮಾರ್‌ ಅಲಿಯಾಸ್‌ ಬಿಡಿಎ ಕುಮಾರ್ ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ಐಎಂಎ ಮುಖ್ಯ ಕಾನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ಮನ್ಸೂರ್ ಖಾನ್‌, ನಿರ್ದೇಶಕರಾದ ನಿಜಾಮುದ್ದೀನ್‌ ಅಹಮ್ಮದ್, ವಸೀಂ, ನವೀದ್‌ ಅಹ್ಮದ್ ಮತ್ತು ನಝೀರ್‌ ಹುಸೈನ್‌ ಇತರ ಆರೋಪಿಗಳು. ಈ ಎಲ್ಲರ ವಿರುದ್ಧ ನಗರದ ಸಿಬಿಐ ಪ್ರಕರಣಗಳ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

‘ಐಎಂಎ ತನ್ನ ಹೂಡಿಕೆದಾರರಿಗೆ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಠೇವಣಿದಾರರ ಹಿತರಕ್ಷಣಾ (ಕೆಪಿಐಡಿ) ಕಾಯ್ದೆಯಡಿ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಮೂಲಕ ವಿಚಾರಣೆ ನಡೆಸಲಾಗಿತ್ತು. ಉಪ ವಿಭಾಗಾಧಿಕಾರಿ ಐಎಂಎ ಕಂಪನಿಯ ಪರವಾಗಿ ನೀಡಿದ್ದ ವರದಿಯನ್ನು ಒಪ್ಪಿಕೊಳ್ಳುವಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಕುಮಾರ್‌ ಅವರಿಗೆ 2019ರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮನ್ಸೂರ್‌ ಅಹಮ್ಮದ್ ಖಾನ್‌ ನಿರ್ದೇಶನದಂತೆ ಐಎಂಎ ಕಂಪನಿಯಿಂದ ₹ 5 ಕೋಟಿ ನೀಡಲಾಗಿತ್ತು’ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

2019ರ ಏಪ್ರಿಲ್‌ ತಿಂಗಳಿನಲ್ಲಿ ಉಪ ವಿಭಾಗಾಧಿಕಾರಿ ವಿಚಾರಣಾ ವರದಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗಿನ ನಂಟನ್ನು ಬಳಸಿಕೊಂಡು ವರದಿಯನ್ನು ಅಂಗೀಕರಿಸುವಂತೆ ಪ್ರಭಾವ ಬೀರುವುದಾಗಿ ಹೇಳಿದ್ದ ಕುಮಾರ್‌, ನಾಲ್ಕು ಕಂತುಗಳಲ್ಲಿ ₹ 5 ಕೋಟಿ ಪಡೆದಿದ್ದರು. ಆದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ವರದಿಯನ್ನು ಒಪ್ಪಿಕೊಂಡಿರಲಿಲ್ಲ. ಅವರು ಅದನ್ನು ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ ವರದಿಯನ್ನು ರವಾನಿಸಿದ್ದರು. ಬಳಿಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಲಾಗಿತ್ತು ಎಂದು ಸಿಬಿಐ ಹೇಳಿದೆ.

‘ಕೆಲಸ ಆಗದ ಕಾರಣದಿಂದ ಕಂಪನಿಯ ನಿರ್ದೇಶಕರು ಹಣ ವಾಪಸ್‌ ನೀಡುವಂತೆ ಒತ್ತಡ ಹೇರಿದ್ದರು. ₹ 30 ಲಕ್ಷವನ್ನು ಮರುಪಾವತಿ ಮಾಡಿದ್ದ ಕುಮಾರ್‌, ₹ 2 ಕೋಟಿ ಹಾಗೂ ₹ 2.5 ಕೋಟಿ ಮೌಲ್ಯದ ಎರಡು ಚೆಕ್‌ಗಳನ್ನು ಐಎಂಎ ನಿರ್ದೇಶಕರಿಗೆ ನೀಡಿದ್ದರು. ಈ ಎಲ್ಲ ದಾಖಲೆಗಳೂ ತನಿಖೆ ವೇಳೆ ಪತ್ತೆಯಾಗಿವೆ. ಕಂಪನಿಯ ನಿರ್ದೇಶಕರು ಮತ್ತು ಕುಮಾರ್‌ ನಡುವೆ ನಡೆದಿರುವ ವಾಟ್ಸ್ ಆ್ಯಪ್‌ ಚಾಟಿಂಗ್‌ನಲ್ಲೂ ಪ್ರಕರಣದ ಕಡತದ ಕುರಿತು ಚರ್ಚಿಸಿರುವುದಕ್ಕೆ ಸಾಕ್ಷ್ಯಗಳು ಲಭಿಸಿವೆ’ ಎಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.