ADVERTISEMENT

ಮನ್ಸೂರ್‌ ಪತ್ತೆಗೆ ಇ.ಡಿ ಕಾನೂನು ಕ್ರಮ

ಐಎಂಎ ಕಂಪನಿಯಲ್ಲಿ ₹ 4,000 ಕೋಟಿ ಬಂಡವಾಳದ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 20:00 IST
Last Updated 29 ಜೂನ್ 2019, 20:00 IST
   

ಬೆಂಗಳೂರು: ಬಂಡವಾಳ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿಗಳ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ) ನಿರ್ಧರಿಸಿದೆ.

ಜೂನ್‌ 8ರಿಂದ ಮನ್ಸೂರ್‌ ತಲೆಮರೆಸಿಕೊಂಡಿದ್ದು, ಈ ಪ್ರಕರಣ ತನಿಖೆ ನಡೆಸುತ್ತಿದ್ದರು ಎಸ್‌ಐಟಿ ಶೋಧ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ, ಮನ್ಸೂರ್‌ ಅವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಇ.ಡಿ ಸಂಪರ್ಕದಲ್ಲಿ ಎಂದು ಮೂಲಗಳು ತಿಳಿಸಿವೆ.

‘ಕಂಪನಿ ಅವನತಿಯ ಹಾದಿ ಹಿಡಿಯಲು ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಕಾರಣ’ ಎಂದು ತಾನು ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಮನ್ಸೂರ್‌ ಆರೋಪಿಸಿದ್ದರು. ಆದರೆ, ಆರೋಪಿಸಿದ ಕಾರಣಕ್ಕೆ ಈ ಪ್ರಕರಣದಲ್ಲಿ ಪ್ರಭಾವಿಗಳೂ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ತನಿಖೆ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಆಹಾರ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ರಿಚ್ಮಂಡ್‌ ಟೌನ್‌ನಲ್ಲಿರುವ ಆಸ್ತಿ ಮಾರಾಟ ಸೇರಿದಂತೆ, ಇತರ ವಿಷಯಗಳ ಬಗ್ಗೆಯೂ ಸಚಿವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಯಾವ ವಿಷಯದ ಕುರಿತು ವಿಚಾರಣೆಗೊಳಿಸಲಾಗುವುದು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮೂಲಗಳು ವಿವರಿಸಿವೆ.

‘ಐಎಂಎ ಕಂಪನಿಯಲ್ಲಿ ₹ 4,000 ಕೋಟಿ ಬಂಡವಾಳದ ವ್ಯವಹಾರ ನಡೆಸಿದೆ. ಹಾಗೆಂದು, ಅಷ್ಟೂ ಮೊತ್ತ ನಷ್ಟವಾಗಿದೆ ಎಂದು ಅರ್ಥವಲ್ಲ. ಈ ಮೊತ್ತ
ದಲ್ಲಿ ಹೆಚ್ಚಿನ ಪ್ರಮಾಣವನ್ನು ಬಂಡವಾಳ ಹೂಡಿಕೆದಾರರಿಗೆ ಕಂಪನಿ ಈಗಾಗಲೇ ವಾಪಸು ನೀಡಿದೆ.

ಮನ್ಸೂರ್‌ ಅವರು ಎಷ್ಟು ಮೊತ್ತವನ್ನು ಬಂಡವಾಳ ಹೂಡಿಕೆದಾರರಿಗೆ ಮರಳಿಸಿದ್ದಾರೆ ಎನ್ನುವುದರ ಮೇಲೆ ನಷ್ಟವನ್ನು ಲೆಕ್ಕ ಹಾಕಬೇಕಾಗುತ್ತದೆ. ನಷ್ಟದ ಪ್ರಮಾಣವನ್ನು ಪೊಲೀಸರು ನಿಖರವಾಗಿ ಲೆಕ್ಕ ಹಾಕಲಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

₹ 1 ಕೋಟಿ ಮೌಲ್ಯದ ಔಷಧಿ ವಶ

ಐಎಂಎ ಒಡೆತನದ ರಯಾನ್‌ ಮಳಿಗೆ ಮತ್ತು ಫ್ರಂಟ್‌ಲೈನ್‌ ಫಾರ್ಮ್‌ಗಳಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶನಿವಾರ ಶೋಧ ಕಾರ್ಯಾಚರಣೆ ನಡೆಸಿದರು.

ಫ್ರೇಜರ್‌ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಲ್ಸ್‌ ರಸ್ತೆಯಲ್ಲಿರುವ ರಯಾನ್‌ ಮಳಿಗೆಯಲ್ಲಿ ₹ 15 ಲಕ್ಷ ಮೌಲ್ಯದ ವಿವಿಧ ಬಗೆಯ ಸುಗಂಧ ದ್ರವ್ಯಗಳು, ಬಟ್ಟೆ, ಬ್ಯಾಗ್‌, ಜರ್ಕಿನ್‌ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಂ.ಎಂ. ರಸ್ತೆಯಲ್ಲಿರುವ ಫ್ರಂಟ್‌ಲೈನ್‌ ಫಾರ್ಮ್‌ ಮಳಿಗೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳ ತಂಡ, ₹ 1 ಕೋಟಿ ಮೌಲ್ಯದ ಔಷಧಿಗಳು, ಒಂದು ಟಾಟಾ ಏಸ್‌ ವಾಹನ ಮತ್ತು ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳನ್ನು ಜಪ್ತಿ ಮಾಡಿದೆ.

ಜಮೀರ್‌ ಅಹಮದ್‌ ವಿರುದ್ಧ ವಂಚನೆ ಆರೋಪ

ಬೆಂಗಳೂರು: ‘ನ್ಯಾಯಾಲಯ ತಡೆಯಾಜ್ಞೆ ನೀಡಿದ್ದ ಬಹುಕೋಟಿ ಮೌಲ್ಯದ ವಿವಾದಿತ ಆಸ್ತಿಯನ್ನು ರಾಜಕೀಯ ಪ್ರಭಾವ ಬಳಸಿಆಹಾರ ಸಚಿವ ಜಮೀರ್‌ ಅಹಮದ್‌ ಖಾನ್‌ ಖರೀದಿಸಿ, ಬಳಿಕ ಐಎಂಎ ವಂಚಕ ಮೊಹಮದ್ ಮನ್ಸೂರ್ ಖಾನ್‌ಗೆ ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ’ ಎಂದು ವಕೀಲ ಎನ್‌.ಆರ್‌. ರಮೇಶ್‌ ಶನಿವಾರ ಆರೋಪಿಸಿದರು.

ಆರೋಪಕ್ಕೆ ಸಂಬಂಧಿಸಿದ 430 ಪುಟಗಳ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಜಮೀರ್‌ ಅವರನ್ನು ಸಚಿವ ಸಂಪುಟದಿಂದ ತಕ್ಷಣ ಕೈಬಿಟ್ಟು, ಕಾಂಗ್ರೆಸ್‌
ನಿಂದ ವಜಾಗೊಳಿಸಬೇಕು. ಈ ಹಗರಣದಲ್ಲಿ ಭಾಗಿಯಾಗಿರುವ ಪಾಲಿಕೆ ಹಾಗೂ ಉಪನೋಂದಣಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಸ್ವತ್ತು ಮಾರಾಟ ಅಕ್ರಮ: ರಿಚ್ಮಂಡ್‌ ಟೌನ್‌ ಬಳಿಯಸರ್ಪೆಂಟೈನ್ ರಸ್ತೆಯ 14,984 ಚ.ಅಡಿ ವಿಸ್ತೀರ್ಣದ 38 ಮತ್ತು 39ನೇ ಸಂಖ್ಯೆಯ ಸ್ವತ್ತುಗಳ ವಿಚಾರವಾಗಿ ಒಂದೇ ಕುಟುಂಬದ ಷಾ ನವಾಜ್‌ ಬೇಗಂ ಮತ್ತು ಅಗಜಾನ್ ಆಸ್ಕರ್ ಅಲಿ ಎಂಬುವವರ ಮಧ್ಯೆ 38ನೇ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವಿಚಾರಣೆ ಹಂತದಲ್ಲಿತ್ತು. ಈ ಸ್ವತ್ತಿನ ಮಾರಾಟ ಅಥವಾ ಗುತ್ತಿಗೆ ನೀಡಲು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಆದರೆ, 2009ರಲ್ಲಿಷಾ ನವಾಜ್‌ ಬೇಗಂ ಅವರಿಂದ ಶಿವಾಜಿನಗರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಜ಼ಮೀರ್ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ₹ 90 ಕೋಟಿ ಮೌಲ್ಯದ ಸ್ವತ್ತನ್ನು ಕೇವಲ ₹ 9.38 ‌ಕೋಟಿಗೆ ಪಡೆದು ಮಾರಾಟ ಮಾಡಿರುವುದಾಗಿ ನೋಂದಣಿಯಾಗಿದೆ. ಬಳಿಕ ಸ್ವತ್ತನ್ನು ಮನ್ಸೂರ್ಖಾನ್‌ಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ₹ 80 ಕೋಟಿಯ ಅಕ್ರಮ ನಡೆದಿದೆ’ ಎಂದೂ ರಮೇಶ್‌ ದೂರಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಮೀರ್‌ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಐಎಂಎ ವಂಚನೆ: ಸಿಬಿಐ ತನಿಖೆ ಇಲ್ಲ; ಗೃಹ ಸಚಿವ

ವಿಜಯಪುರ: ‘ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದು, ತನಿಖೆ ನಡೆಸಲಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.

ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ವಹಿಸಬೇಕು ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಶನಿವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದರು ಎಂಬುದನ್ನು ಮೊದಲು ಹೇಳಲಿ’ ಎಂದು ಸವಾಲು ಹಾಕಿದರು.

‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಸೇರಿದಂತೆ ಹಲವು ಪ್ರಮುಖ ಅಪರಾಧ ಪ್ರಕರಣಗಳಲ್ಲಿ ರಾಜ್ಯದ ಪೊಲೀಸರೇ ಆರೋಪಿ ಬಂಧಿಸಿದ್ದಾರೆ. ಹೀಗಾಗಿ ನಮ್ಮ ಪೊಲೀಸ್‌ ವ್ಯವಸ್ಥೆ ಮೇಲೆ ವಿಶ್ವಾಸ ಇಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಯೋತ್ಪಾದಕ ಸಂಘಟನೆಗಳಿಗೂ ಐಎಂಎ ಹಣ ಹಂಚಿರುವ ಸಾಧ್ಯತೆ ಇದೆ ಎಂಬ ಶೋಭಾ ಹೇಳಿಕೆಗೆ, ‘ಅದನ್ನು ಅವರನ್ನೇ ಕೇಳಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನೋಟಿಸ್ ತಪ್ಪಲ್ಲ: ‘ಐಎಂಎ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.