ಬೆಂಗಳೂರು: ಹೂಡಿಕೆದಾರರಿಗೆ ಪಂಗನಾಮ ಹಾಕಿ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದ್ದು, ಈ ತಿಂಗಳ 24ರಂದು ಬೆಳಿಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇ.ಡಿ ಸಮನ್ಸ್ ಅನ್ನು ಶಿವಾಜಿ ನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಜ್ಯುವೆಲ್ಸ್ ಕಚೇರಿಗೆ ಅಂಟಿಸಲಾಗಿದೆ. ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣದಲ್ಲಿ ಇಸಿಐಆರ್ ದಾಖಲಿಸಿರುವ ಇ.ಡಿ ಸಹಾಯಕ ನಿರ್ದೇಶಕ ಬಸವರಾಜ್ ಮಗ್ದುಂ ಈ ನೋಟಿಸ್ ಜಾರಿ ಮಾಡಿದ್ದಾರೆ.
ಪಾಸ್‌ಪೋರ್ಟ್ ಗಾತ್ರದ ಫೋಟೊ, ಪಾಸ್‌ಪೋರ್ಟ್, ಆಧಾರ್ ಕಾರ್ಡ್,ಪ್ಯಾನ್ ಕಾರ್ಡ್, ಎಲ್ಲ ಬ್ಯಾಂಕ್ ಖಾತೆ ವಿವರಗಳು, ದೇಶ– ವಿದೇಶಗಳಲ್ಲಿ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಉದ್ಯಮಗಳು, ಭಾಗಿಯಾಗಿರುವ ಕಂಪನಿಗಳು, ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರಗಳು, ಕಂಪನಿಗಳು ಆರಂಭವಾದ ವರ್ಷದಿಂದ ಸಲ್ಲಿಸಲಾಗಿರುವ ಐ.ಟಿ ರಿಟರ್ನ್ಸ್ ದಾಖಲೆಗಳನ್ನು ತರುವಂತೆ ನೋಟಿಸ್‌ನಲ್ಲಿ ಮನ್ಸೂರ್ ಖಾನ್‌ಗೆ ಸೂಚಿಸಲಾಗಿದೆ.
ಐಎಂಎಯಲ್ಲಿ ಹಣ ಹೂಡಿ ವಂಚನೆಗೆ ಒಳಗಾಗಿರುವ 35 ಸಾವಿರಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ. ಮನ್ಸೂರ್ ಖಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ.
450 ಕೋಟಿ ವಹಿವಾಟು ಪತ್ತೆ!
ಆದಾಯ ತೆರಿಗೆ ಇಲಾಖೆ ಮಾರ್ಚ್ 8ರಂದು ‘ಐಎಂಎ’ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ₹ 48 ಕೋಟಿ ಹಣ ಪತ್ತೆಯಾಗಿತ್ತು. ಸಂಪೂರ್ಣ ಕಂಪನಿ ವಹಿವಾಟನ್ನು ಜಾಲಾಡಿದಾಗ ₹ 450 ಕೋಟಿ ವ್ಯವಹಾರ ನಡೆಸಿದ್ದು ಕಂಡುಬಂತು.
ಆನಂತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್, ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ’ (ಪಿಎಂಜಿಕೆವೈ) ಅಡಿ 48 ಕೋಟಿಗೆ ಶೇ 50ರಷ್ಟು ದಂಡ ಕಟ್ಟಿದರು. ಉಳಿದ ₹ 450 ಕೋಟಿ ವಹಿವಾಟನ್ನು ಈ ಯೋಜನೆಯಡಿ ಘೋಷಿಸಿಕೊಳ್ಳಲು ಸಮ್ಮತಿಸಿದರು ಎಂದು ಮೂಲಗಳು ಹೇಳಿವೆ.
₹ 20 ಕೋಟಿ ಮೌಲ್ಯದ ಆಭರಣ ಜಪ್ತಿ
ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ‘ಐಎಂಎ ಸಮೂಹ ಕಂಪನಿ’ ಪ್ರಧಾನ ಕಚೇರಿ ಮೇಲೆ ಗುರುವಾರ ದಾಳಿ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ₹ 20 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ಜಪ್ತಿ ಮಾಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಕಂಪನಿಯ ಕಚೇರಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬೀಗ ಹಾಕಿದ್ದರು. ನ್ಯಾಯಾಲಯದ ಅನುಮತಿ ಪಡೆದು ಬೀಗ ತೆಗೆಸಿದ ಎಸ್‌ಐಟಿ ಅಧಿಕಾರಿಗಳು, ‘ಐಎಂಎ ಜ್ಯುವೆಲ್ಸ್’ ಮಳಿಗೆ ಹಾಗೂ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು.
ಜಪ್ತಿ ಮಾಡಿದ ಆಭರಣ ಹಾಗೂ ದಾಖಲೆಗಳನ್ನು ನಾಲ್ಕು ಟ್ರಂಕ್‌ನಲ್ಲಿ ಭದ್ರವಾಗಿ ಇಡಲಾಯಿತು. ಆ ಟ್ರಂಕ್‌ಗಳನ್ನು ಎಸ್‌ಐಟಿ ಸಿಬ್ಬಂದಿ, ತಮ್ಮ ಕಚೇರಿಗೆ ತೆಗೆದುಕೊಂಡು ಹೋದರು. ಆ ಟ್ರಂಕ್‌ಗಳನ್ನು ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
‘ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪರಿಶೀಲನೆ ನಡೆಸಲಾಯಿತು. 30 ಕೆ.ಜಿ ಚಿನ್ನಾಭರಣ, 450 ಕೆ.ಜಿ ಬೆಳ್ಳಿ ಆಭರಣ ಹಾಗೂ 2,600 ಕ್ಯಾರೆಟ್ ವಜ್ರಾಭರಣ ಜಪ್ತಿ ಮಾಡಲಾಗಿದೆ’ ಎಂದು ಎಸ್‌ಐಟಿ ತಂಡದಲ್ಲಿರುವ ಡಿಸಿಪಿ ಎಸ್. ಗಿರೀಶ್ ಹೇಳಿದರು.
ಬಂಧಿತರನ್ನು ವಶಕ್ಕೆ ನೀಡಲು ಆದೇಶ
ಸದ್ಯ ಬಂಧಿತರಾಗಿ ಎಸ್‌ಐಟಿ ವಶದಲ್ಲಿರುವ ಐಎಂಎ ಕಂಪನಿಯ ಎಂಟು ನಿರ್ದೇಶಕರನ್ನು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ನೀಡಲು ಇಲ್ಲಿನ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಜಾರಿ ನಿರ್ದೇಶನಾಲಯದ ಪರ ವಕೀಲ ಪಿ.ಪ್ರಸನ್ನಕುಮಾರ್ ಗುರುವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ‘ಲೇವಾದೇವಿ ನಿಯಂತ್ರಣ ಕಾಯ್ದೆ–2002ರ ಕಲಂ 50 (3)ರ ಅಡಿಯಲ್ಲಿ ಆರೋಪಿಗಳನ್ನು ಇ.ಡಿ ವಶಕ್ಕೆ ನೀಡಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶೆ ರೇಷ್ಮಾ ಜೇನ್ ರೋಡ್ರಿಗಸ್ ಅವರು, ‘ಮೇಲ್ನೋಟಕ್ಕೆ ಆರೋಪಿಗಳು ವಿರುದ್ಧದ ಆಪಾದನೆಯ ಕುರಿತಂತೆ ವಿಸ್ತೃತ ತನಿಖೆಯ ಅಗತ್ಯವಿದೆ. ಆದ್ದರಿಂದ ಸದ್ಯ ಎಸ್‌ಐಟಿ ವಶದಲ್ಲಿರುವ (ವಿಶೇಷ ತನಿಖಾ ತಂಡ) ಎಂಟು ಆರೋಪಿಗಳನ್ನು ಇ.ಡಿ ವಶಕ್ಕೆ ನೀಡಬೇಕು’ ಎಂದು ಆದೇಶಿಸಿದರು.
ನಾಸಿರ್ ಹುಸೇನ್, ನವೀದ್ ಅಹಮದ್ ನತ್ತಮಕರ್, ನಿಜಾಮುದ್ದೀನ್ ಅಜೀಮುದ್ದೀನ್, ಆಫ್ಸಾನ್ ತಬಸ್ಸುಮ್, ಅಹಮ್ ಅಫ್ಸರ್ ಪಾಷ, ಆರ್ಷದ್ ಖಾನ್, ವಾಸೀಂ ಮತ್ತು ದಾದಾಪೀರ್ ಇಮಾಮ್‌ಸಾಬ್ ಬಂಧಿತ ಆರೋಪಿಗಳು.
‘ಕಡಿವಾಣ ಹಾಕಲು ಸಾಧ್ಯವಿತ್ತು’
ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದ ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ‘ಕರ್ನಾಟಕ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ‘ಗೆ (ಕೆಪಿಐಡಿ) ಸೂಕ್ತ ತಿದ್ದುಪಡಿ ಮಾಡಿದ್ದರೆ ಇಂಥ ಕಂಪನಿಗಳಿಗೆ ಕಡಿವಾಣ ಹಾಕಬಹುದಿತ್ತು ಎಂಬ ಅಭಿಪ್ರಾಯಗಳು ಕಾನೂನು ವಲಯದಲ್ಲಿ ಕೇಳಿಬರುತ್ತಿದೆ.
ತಿದ್ದುಪಡಿ ಮಸೂದೆ ಮಂಡನೆಗೆ ಸಮಯಾವಕಾಶ ಬೇಕಾಗಲಿದೆ ಎಂದಾದರೆ ತಕ್ಷಣಕ್ಕೆ ಸುಗ್ರೀವಾಜ್ಞೆ ತರಬಹುದಿತ್ತು ಎಂಬುದು ಕಾನೂನು ತಜ್ಞರ ನಿಲುವು.
ಟ್ರಂಕ್ ಹೊತ್ತೊಯ್ದ ಎಸ್‌ಐಟಿ
ನ್ಯಾಯಾಲಯದ ಅನುಮತಿ ಮೇರೆಗೆ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ‘ಐಎಂಎ ಸಮೂಹ ಕಂಪನಿ’ ಪ್ರಧಾನ ಕಚೇರಿಯ ಬಾಗಿಲು ತೆರೆದಿದ್ದ ಎಸ್ಐಟಿ ಅಧಿಕಾರಿಗಳು, ತಪಾಸಣೆ ನಡೆಸಿದರು.
ಪ್ರಕರಣ ದಾಖಲಾಗುತ್ತಿದ್ದಂತೆ ಕಂಪನಿಯ ಕಚೇರಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬೀಗ ಹಾಕಿದ್ದರು. ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ಎಸ್‌ಐಟಿ, ನ್ಯಾಯಾಲಯದ ಅನುಮತಿಯಂತೆ ಇತ್ತೀಚೆಗೆ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಕೆಲ ದಾಖಲೆ ಹಾಗೂ ಆಭರಣಗಳನ್ನು ಜಪ್ತಿ ಮಾಡಿತ್ತು. ಅವುಗಳನ್ನೆಲ್ಲ ಒಂದೆಡೆ ಇಟ್ಟು ಪುನಃ ಕಚೇರಿಗೆ ಬೀಗ ಹಾಕಲಾಗಿತ್ತು.
ಜಪ್ತಿ ಮಾಡಿದ್ದ ವಸ್ತುಗಳನ್ನೆಲ್ಲ ಗುರುವಾರ ಟ್ರಂಕ್‌ನಲ್ಲಿಟ್ಟುಕೊಂಡು ಎಸ್‌ಐಟಿ ಸಿಬ್ಬಂದಿ, ತಮ್ಮ ಕಚೇರಿಗೆ ತೆಗೆದುಕೊಂಡು ಹೋದರು. ಆ ಟ್ರಂಕ್‌ಗಳನ್ನು ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
‘ಕಚೇರಿಗೆ ಭೇಟಿ ನೀಡಿದಾಗಲೆಲ್ಲ ದಾಳಿ ಎಂದು ಹೇಳಲಾಗದು. ಇದೊಂದು ನಿರಂತರ ಪ್ರಕ್ರಿಯೆ. ಈಗಾಗಲೇ ಏಳು ನಿರ್ದೇಶಕರನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಜೊತೆಗೆ ಪ್ರಕರಣದ ತನಿಖೆ ಬಗ್ಗೆಯೂ ನ್ಯಾಯಾಲಯಕ್ಕೆ ತಿಳಿಸಬೇಕು. ಹೀಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿದೆ.
ಸಿಬಿಐ ತನಿಖೆಗೆ ಆಗ್ರಹ
ಐಎಂಎ ಸಮೂಹ ಸಂಸ್ಥೆಗಳ ಮಾಲೀಕ ಮನ್ಸೂರ್ ಖಾನ್‌ನಿಂದ 2.25 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ವಂಚನೆಗೊಳಗಾಗಿದ್ದು, ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಹೂಡಿಕೆದಾರರ ಪರ ‘ಹಝರತ್ ಟಿಪ್ಪು ಸುಲ್ತಾನ್ ಅಮಾನ್ ಫೆಡರೇಷನ್’ನ ನಗರ ಘಟಕದ ಅಧ್ಯಕ್ಷ ಮುರ್ತುಜಾ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಹೆಚ್ಚಿನ ಲಾಭಾಂಶ ನೀಡುವ ಆಮಿಷ ಒಡ್ಡಿ ಅಲ್ಪಸಂಖ್ಯಾತ ಸಮುದಾಯದ ಬಡ ನೂರಾರು ಮಂದಿಗೆ ಐಎಂಎ ಸಮೂಹ ಸಂಸ್ಥೆಯ ಹೆಸರಿನಲ್ಲಿ ₹ 1,600 ಕೋಟಿಗೂ ಹೆಚ್ಚು ಹಣವನ್ನು ಮನ್ಸೂರ್ ಖಾನ್ ಸಂಗ್ರಹಿಸಿದ್ದಾನೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು.
ಸಂಸ್ಥೆಯ ಅಧ್ಯಕ್ಷರಾಗಿದ್ದ ಮನ್ಸೂರ್, ಇದೇ 10ರಿಂದ ತಲೆಮರೆಸಿಕೊಂಡಿದ್ದು, ಈ ಬಗ್ಗೆ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ಈವರೆಗೆ 40 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಹಣ ಕಳೆದುಕೊಂಡು ನೋವಿನಿಂದ 10 ಮಂದಿ ಈಗಾಗಲೇ ಸಾವಿಗೆ ಶರಣಾಗಿದ್ದು, ಕೆಲವರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಈ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದೂ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪತ್ರದ ಪ್ರತಿಯನ್ನು ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, ವಿದೇಶಾಂಗ ಸಚಿವ ಜೈ ಶಂಕರ್, ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಮಿತ್ ನಾರಾ ಅವರಿಗೂ ಮುರ್ತುಜಾ ಖಾನ್ ಕಳುಹಿಸಿದ್ದಾರೆ.
ಐಎಂಎ ತನಿಖೆಗೆ ಅಗತ್ಯ ಕ್ರಮ: ನಿರ್ಮಲಾ ಸೀತಾರಾಮನ್ ಭರವಸೆ
ನವದೆಹಲಿ: ಐಎಂಎ ವಂಚನೆ ಪ್ರಕರಣದ ತನಿಖೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಭರವಸೆ ನೀಡಿದರು.
ಕರ್ನಾಟಕದ ಬಿಜೆಪಿ ಸಂಸದರ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ಇ.ಡಿ) ಈಗಾಗಲೇ ತನಿಖೆ ಆರಂಭಿಸಿದೆ. ಅಗತ್ಯಬಿದ್ದರೆ ಬೇರೆ ಸಂಸ್ಥೆಗಳಿಂದ ತನಿಖೆ ನಡೆಸುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದರು.
ಸಂಸದರಾದ ಶೋಭಾ ಕರಂದ್ಲಾಜೆ, ಜಿ.ಎಂ. ಸಿದ್ದೇಶ್ವರ, ಪಿ.ಸಿ. ಮೋಹನ್, ಪ್ರಭಾಕರ ಕೋರೆ, ಬಿ.ವೈ. ರಾಘವೇಂದ್ರ, ಆನೇಕಲ್ ನಾರಾಯಣಸ್ವಾಮಿ ಹಾಗೂ ಇತರರು ನಿಯೋಗದಲ್ಲಿ ಇದ್ದರು. ಐಎಂಎ ಸಮೂಹ ಸಂಸ್ಥೆಯ ಅಧಿಕ ಬಡ್ಡಿಯ ಆಸೆಯಿಂದ ಸಾವಿರಾರು ಜನರು ವಂಚನೆ ಒಳಗಾಗಿದ್ದಾರೆ ಎಂದು ಸೀತಾರಾಮನ್ ಅವರಿಗೆ ನಿಯೋಗ ಮನವರಿಕೆ ಮಾಡಿಕೊಟ್ಟಿತು.
‘ಪ್ರಜಾವಾಣಿ’ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ‘ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕರ್ನಾಟಕ ಸರ್ಕಾರವು ಸಂಸ್ಥೆ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದರೂ, ವಂಚಕರಿಗೆ ಶಿಕ್ಷೆ ಆಗುತ್ತದೆ ಎಂಬ ಭರವಸೆ ಇಲ್ಲ. ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಬದಲಾಗಿ, ದಾಖಲೆಗಳನ್ನು ತಿರುಚುವ ಮೂಲಕ ಎಸ್‌ಐಟಿ ಅವರನ್ನು ಪಾರು ಮಾಡಬಹುದು’ ಎಂದು ಶೋಭಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.